ಹಂದರದೊಳಗೆ

ಮಿದುಗೊಡೆ ಹಂದರದಿ ಕಲಾವಿದರಿಬ್ಬರು ಕೂಡಿ ಸುರಿದ ಬಣ್ಣದ ಆರೋಪಕ್ಕೆ ಗುರಿಯಾಗಿ ಬಂಧಿಯಾಗಿ ಬಿದ್ದಿದ್ದೇನೆ ಯಾವ ಕೋರ್ಟು, ಬೇಡಿಗಳಿಲ್ಲದೆ ಬೆಳಕು ಶೂನ್ಯ ಕೋಟೆಯೊಳಗೆ ಬೆಟ್ಟದಲಿ ಹುಟ್ಟಿದ ಮರಕ್ಕೇನು ಗೊತ್ತು ಬೀಜವನು ಬಿತ್ತಿದವರಾರೆಂದು ಎನಗೂ ಇಲ್ಲಿ ಸುಳಿವು ಇಲ್ಲ ಬಿತ್ತಿದ್ದಾರೆ... ಬೆಳೆಯುತ್ತಿದ್ದೇನೆ... ವ್ಯಂಗ್ಯ, ಪ್ರಶಂಸೆ, ಆರೋಪ ಪ್ರವಚನಗಳ ಮಧ್ಯೆ ಸುಖವನು ಮರೆಸಿ ಸಾಲಕ್ಕೆ ಹೇತುವಾಗಿ ಬಿಳಿಯಂಗಿ ದೇವರ ಹುಂಡಿ ತುಂಬಿದ್ದೇನೆ ಮುಂದೆ...! ಕಸವಾಗಿ ಕೊಳೆತು ಗೊಬ್ಬರವಾಗಿ, ನಾರಿ ಗಬ್ಬೆದ್ದು ಹೋಗುವೆನೊ..!? ಜೋಕಾಲಿ ಪದಕೆ ಕಿವಿಯಾಗಿ, ಮುದುಡಿ ಮುದ್ದು ಕೂಸಾಗಿ ನಲಿಯುವೆನೋ..!? ಧಾವಿಸುತ್ತಿವೆ... ಮತಿ ಬಲಿಯುವ ಮುನ್ನ ದಿಕ್ಕೆಂಟು ಭಾಗದಿಂದ ದಿಕ್ಕೆಟ್ಟ ಪ್ರಶ್ನೆಗಳು ಸಮ್ಮತಿ ಅಸಮ್ಮತಿಗೆ ಸಾಕ್ಷಿ ನಾನು.. ಸೋಲು ಗೆಲುವಿನ ನಿಷ್ಕರ್ಷೆ ನಾನು.. ಎಲ್ಲವೂ ಅಸಂಗತ, ಗೋಜಲು ಕರುಳ ಹಗ್ಗದಲಿ ಹೊಸೆದ ಬಾಂಬು ನಾನು ರಕ್ತರಾಡಿಯಲ್ಲೆ ಪ್ರಕಟವಾಗುತ್ತೇನೆ ಚಿತ್ಕಾರ, ಚಿರಾಟ ಕಣ್ಣೀರ ವಿಷಮಾವಸ್ಥೆಯಲಿ ಕೊನೆಗೆಲ್ಲ ಶಾಂತ, ಸಂತೋಷ ಮೌನದಲಿ... ಮಿದುಗೊಡೆ ಹಂದರದೊಳಗೆ ಮಾಂಸಮುದ್ದೆಯಾಗಿ ನೀವು ಹೊಲಿಯುವ ಕುಲಾವಿಗೆ ದೇಹ ಹೊಂದಿಸುತ್ತಿರುವೆ ಮಳೆಯಾಸೆ ಹೊತ್ತ ದಟೈಸಿ ಕವಿದ ಕಾರ್ಮೋಡದಂತೆ ಗೋಜಲಿನಿಂದ ಮಗ್ಗುಲು ಬದಲಾಯಿಸ ಹೊರಟ ಹೆಸರಿಡುವ ಮೊದಲು ತಲೆಕೆಳಗಾದ ‘ಭ್ರೂಣ’ ನಾನು ಮಿದುಗೊಡೆ ಹಂದರದಿ ಯಾವ ಕೋರ್ಟು, ಬೇಡಿಗಳಿಲ್ಲದೆ ಕಲಾವಿದರಿಬ್ಬರು ಕೂಡಿ ಸುರ...