ತುಂಡುಭೂಮಿ

ತುಕ್ರನಿಗೆ ಎರಡು ದಿನದಿಂದ ಪುರುಸೊತ್ತಿಲ್ಲ. ಎಲೆಯಡಿಕೆ ಹಾಕಲೂ ಬಿಡುವಿಲ್ಲದಷ್ಟು ಕೆಲಸ. ಕೊರಗಪ್ಪ ಶೆಣೈರ ಮಕ್ಕಳ ಜಗಳವೀಗ ಆಸ್ತಿ ಪಾಲಾಗುವಲ್ಲಿಗೆ ಬಂದು ಮುಟ್ಟಿತ್ತು. ತುಕ್ರನಿಗೆ ಈ ಪಾಲಿನ ದೆಸೆಯಿಂದ ಇಡೀ ಗುಡ್ಡೆ ಬೈಲೆಲ್ಲ ಅಲೆದಾಡಿ, ಸರ್ವೆಯ ಸರಪಳಿಯೆಳೆದು ಸಾಕು ಸಾಕಾಗಿತ್ತು ಆದರೂ ಆತನಿಗೆ ಖುಷಿಯೊ ಖುಷಿ. ಈ ನಡುವೆ ಆ ಜಾಗ ನನ್ನದು, ಅವಳಿಗೇಕಲ್ಲಿ, ಆ ಜಾಗ ಇವಳಿಗ್ಯಾಕೆ ಎನ್ನುವ ತಕರಾರಿನಿಂದ ಎರಡೆರಡು ಬಾರಿ ಸರ್ವೆಯಾಯಿತು. ತುಕ್ರನಿಗೆ ಆ ಸರಪಳಿಯನ್ನು ನೋಡುವಾಗÀ ಹೆಬ್ಬಾವನ್ನು ಕಂಡಂತಾಗುತ್ತಿತ್ತು. ಅವನ ಸಣಕಲು ದÉೀಹ ಆ ಮಣಭಾರದ ಸರಪಳಿಯನ್ನು ಇಡೀ ದಿನ ಹಿಡಿದು ಸುತ್ತಾಡಲು ಹೆಣಗುತ್ತಿತ್ತು. ಮೂಳೆಯ ಮೇಲೆ ಡಾಂಬರು ಹೊಯ್ದದಂತಿರುವ ಚರ್ಮ. ಗುಂಡಿಯ ನೀರಿನಲ್ಲಿ ಕಾಣುವ ಸೂರ್ಯನಂತೆ ಗುಳಿಬಿದ್ದ ಕಣ್ಣು. ಊರ ರಸ್ತೆಯಲ್ಲಿ ಯಥೇಚ್ಛ ಉಬ್ಬು ತಗ್ಗುಗಳಿರುವಂತೆ ಈತನ ದೇಹ ರಕ್ತಮಾಂಸ ತುಂಬಿಕೊಳ್ಳದೆ ಕೈಕಾಲಿನ ಗಂಟುಗಳೆ ಎದ್ದುಕಾಣುತ್ತಿದ್ದವು. ಆತನಿಗೆ ಸರ್ವೆಗಿಂತಲೂ ಮನಸು ಕೊರೆಯುವ ವಿಚಾರವೆಂದರೆ. ಶೆಣೈ ಮಕ್ಕಳು ಆ ಜಾಗ ನನ್ನದು, ಈ ಜಾಗ ನನ್ನದು ಎನ್ನುವಾಗÀ ಬೇಸರವಾಗುತ್ತಿತ್ತು, ಅದೆಲ್ಲ ನನ್ನದು ಎಂದು ಆತನ ಮನಸ್ಸು ತಳಮಳಿಸುತ್ತಿತ್ತು. ಆತ ಬಹುಕಾಲದಿಂದ ಶೆಣೈಯೊರ ಮನೆಯಲ್ಲಿ ಜೀತದಾಳಿನಂತೆ ಕೆಲಸ ಮಾಡಿದವ, ಮೇಲಾಗಿ ಒಕ್ಕಲಿನವ. ಅವ ಹೇಳುವ ಧಣಿಗಳ ಗದ್ದೆಯ ಮಣ್ಣಿನ ಗುಣ ನನಗೆ ಗೊತ್ತಿರು...