ಕರಾವಳಿ ಬದುಕಿನ ಹಿನ್ನೆಲೆಯಲ್ಲಿ ‘ಗಾಂಧಿ ಬಂದ’ ಕಾದಂಬರಿಯ ಮಹತ್ವ


ಕರಾವಳಿಯ ಬದುಕು ಕನ್ನಡದ ಸೀಮೆಯೊಳಗಿದ್ದರೂ ಸಂಪೂರ್ಣ ಭಿನ್ನವಾದ ಸಂಸ್ಕøತಿಯಾಗಿದೆ. ಈ ಸಂಸ್ಕøತಿಯ ಪೂರ್ಣ ಆಳ, ಅಗಲ ತಿಳಿಯಲು ಕರಾವಳಿಯ ಮಣ್ಣಿನ ಜೀವನದ ಭಾಗವಾಗದ ಹೊರತು ಅದನ್ನು ಗ್ರಹಿಸಲು ಸಾಧ್ಯವಿಲ್ಲ. ಅಲ್ಲಿನ ತುಳು ಸಂಸ್ಕøತಿ ಜಾತಿ, ಮತ, ಪಂಥ, ಭೇದಗಳನ್ನು ಮೀರಿದ ಸಂಪತ್ತು. ಕೇರಳ, ಕರ್ನಾಟಕ ರಾಜ್ಯಗಳ ಒಳಗೆ ಈ ಸಂಸ್ಕøತಿ ಹರಡಿಕೊಂಡಿದೆ. ಇಲ್ಲಿ ಭಾಷೆ ಮತ್ತು ಜೀವನ ಹಾಲು ನೀರಿನಂತೆ ಬೆರೆತು ಹೋಗಿದೆ. ದ್ರಾವಿಡ ಭಾಷೆಗಳ ಸಂದರ್ಭದಲ್ಲಿ ತುಳುವಿನ ಚರ್ಚೆನಡೆದರೂ ಅದಕ್ಕೆ ನೀಡಿರುವ ಕಿಮ್ಮತ್ತು ಎಷ್ಟೆಂದು ಎಲ್ಲಾ ತುಳುವರಿಗೂ ತಿಳಿದಿರುವ ವಿಚಾರವೆ. ಇಂತಹ ಸಂದರ್ಭದಲ್ಲಿ ನಾಗವೇಣಿ ಅವರ ‘ಗಾಂಧಿ ಬಂದ’ ಕಾದಂಬರಿ ಮುಖ್ಯವಾಗುತ್ತದೆ. 




    ‘ಗಾಂಧಿ ಬಂದ’ ಕಾದಂಬರಿ ಕರಾವಳಿಯ ಒಂದು ಕಾಲಘಟ್ಟದ ಚರಿತ್ರೆ. ತುಳುವ ಸಂಸ್ಕøತಿಯ ಭಾಗವಾಗಿ, ಸ್ತ್ರೀವಾದಿ ದೃಷ್ಟಿಕೋನ, ಸ್ವಾತಂತ್ರ್ಯ ಹೋರಾಟ ಮತ್ತು ಗಾಂಧೀಜಿಯವರ ಚಳುವಳಿಯು ಕರಾವಳಿಯ ಮೇಲೆ ಬೀರಿದ ಪರಿಣಾಮ, ಈ ಎಲ್ಲಾ ದೃಷ್ಟಿಕೋನಗಳಿಂದ ಈ ಕಾದಂಬರಿಯನ್ನು ನೋಡಬಹುದು ಅಥವಾ ಬಿಡಿ ಬಿಡಿಯಾಗಿ ನೋಡಬಹುದು. ಹೌದು ಈ ಕಾದಂಬರಿಗೆ ಮೇಲೆ ಹೇಳಿದ ವಿಭಿನ್ನ ಅಂಚುಗಳಿವೆ. ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡಬಹುದಾದ ಗುಣ ಈ ಕಾದಂಬರಿಗಿದೆ. ಹಲವು ದಾರಗಳಿಂದ, ವಿಭಿನ್ನ ನೂಲುಗಳಿಂದ ಹೆಣೆದು ಕಸೂತಿ ಹಾಕಿದ ನಾಗವೇಣಿಯವರ ಕಥನ ಕಲೆ ಮೆಚ್ಚುವಂತದ್ದೆ.    ಒಂದು ಕಾಲದ ಚಾರಿತ್ರಿಕ ಹಿನ್ನೆಲೆಯಿಂದ ಈ ಕಾದಂಬರಿಯನ್ನು ನೋಡಿದಾಗ ಈ ಕಾದಂಬರಿ ಹೇಗೆ ಮುಖ್ಯ ಎಂದರೆ “ಆಗಲೆ ಕದಡಿದ್ದ ತನ್ನ ತುಳುವ ನೆಲದ ಕೋಮು ಸಾಮರಸ್ಯ ಮತ್ತಷ್ಟು ಆಳವಾಗಿ ಕದಡಲಿದೆ ಎಂಬ ಮುನ್ಸೂಚನೆಯು ಸಿಕ್ಕ ಹೊತ್ತದು. ಆ ಹೊತ್ತಲ್ಲಿ ನಾನು ಈ ನನ್ನ ಮಣ್ಣಿನ ಒಂದು ಕಾಲಘಟ್ಟದ ಸಾಂಸ್ಕøತಿಕ, ಸಾಮಾಜಿಕ ಹಾಗೂ ಮನುಷ್ಯ ಸಂಬಧಗಳ ಚಿತ್ರಣಗಳ ಹಲವು ಎಳೆಗಳನ್ನೆಳೆದುಕೊಂಡು, ಇತಿಹಾಸವೆಂಬ ಖಾದಿ ತುಂಡಿನ ಮೇಲೆ ಆ ಕಾಲದ ಕೋಮು ಸಾಮರಸ್ಯವನ್ನು ಬಿಂಬಿಸುವ ಕಥಾ ವಸ್ತುವನ್ನಿಟ್ಟುಕೊಂಡು ಈ ಕಾದಂಬರಿ ಬರೆದೆ” ಎನ್ನುವ ಮಾತನ್ನು ಲೇಖಕಿ ಹೇಳುತ್ತಾರೆ. ಅಂದರೆ ಕರಾವಳಿ ಬದುಕು ಒಂದು ಸಂಕ್ರಮಣ ಕಾಲದಲ್ಲಿದ್ದ ಸಂದರ್ಭದಲ್ಲಿ ಈ ಕಾದಂಬರಿ ಮೂಡಿ ಬಂದಿದೆ. ಹಾಗಾದರೆ ಇಂದು ಕರಾವಳಿಯ ಪರಿಸ್ಥಿತಿ ಏನಾಗಿದೆ. ಈ ಹೊತ್ತಲ್ಲಿ ಈ ಕಾದಂಬರಿಯ ಪ್ರಾಮುಖ್ಯತೆ ಏನು ಎಂಬುದು ಮುಖ್ಯವಾಗುತ್ತದೆ. ಸಾಹಿತ್ಯಕ್ಕೆ ವರ್ತಮಾನ ಕಾಲದ ಚರಿತ್ರೆಯನ್ನು ಕಟ್ಟುವುದರ ಜೊತೆಗೆ ಭವಿಷ್ಯವನ್ನು ಗ್ರಹಿಸುವ ಶಕ್ತಿಯೂ ಇದೆ ಎನ್ನುವುದು ಸತ್ಯ. ಈ ಕಾದಂಬರಿಯಲ್ಲಿ ಅದು ಸಾಬಿತಾಗಿದೆ ಎಂದರೆ ತಪ್ಪಲ್ಲ. ಲೇಖಕಿಯು ಗ್ರಹಿಸಿದ ಬದಲಾಗಲಿರುವ ಸಮಾಜ ಗ್ರಹಿಕೆಯಂತೆ ಕರಾವಳಿಯು ಇಂದು ಮತೀಯ ಕಲಹದಲ್ಲಿ ಕದಡಿ ಹೋಗಿದೆ. ಗಾಂಧಿ ಕಾಲದ ‘ಅದ್ರಾಮ’ ‘ಪಾಂಡು ಶೆಟ್ಟಿ’ ‘ತೌಡ ಶೆಟ್ಟಿ’ ಮುಂತಾದವರು ತುಳುನಾಡಿನಲ್ಲಿ ಇಲ್ಲವಾಗಿದ್ದಾರೆ. ಇದ್ದರೂ ಅವರ ಮಾತಿಗೆ ಮೂರುಕಾಸಿನ ಬೆಲೆಯಿಲ್ಲ. ಹಾಗದರೆ ಇದಕ್ಕೆ ಕಾರಣಗಳೇನು ಎನ್ನುವುದನ್ನು ಶೋಧಿಸ ಹೊರಟರೆ ನಮಗೆ ವಿಪರ್ಯಾಸ, ವೈರುಧ್ಯಗಳೇ ಕಾಣಸಿಗುತ್ತವೆಯೇ ಹೊರತು ಬೇರೆನೂ ಇಲ್ಲ. ಸಾಮರಸ್ಯವೆಂದರೆ ಏನೆಂದು ಜಗತ್ತಿಗೆ ಬೋಧಿಸಿದ್ದ ನಾವು ಇಂದು ಆ ಪಾಠವನ್ನು ಮತ್ತೆ ಹೊರಗಿನವರಿಂದ ಕೇಳುವಲ್ಲಿಗೆ ಮುಟ್ಟಿದ್ದೆವೆ. ತುಳುನಾಡಿನ ಕಥೆಯೂ ಇದಕ್ಕಿಂತ ಭಿನ್ನವಲ್ಲ.  ಅನೇಕ ಸಂಘಟನೆಗಳ ಮುಖಂಡರು ಮಾತಿನಲ್ಲೆ ತಯಾರಿಸಿದ ಸಮಾಸದಲ್ಲಿ ಜಾತಿ, ಧರ್ಮವನ್ನು ಕಲಸಿ ದ್ವೇಷ, ಅಸೂಯೆ, ಅಸಹಿಷ್ಣುತೆಯನ್ನು ಅದರೊಳಗೆ ತುರುಕಿ ಜನರ ಬಾಯೋಳಗಿಟ್ಟರು. ಜನ ಅದನ್ನು ಚಪ್ಪರಿಸಿ ‘ರುಚಿಯೆಂದರೆ ಇದಪ್ಪ’ ಎನ್ನುತ್ತಾ ಅವರಿಗೆ ಸಲಾಂ ಹೊಡೆದರು. ಅದರ ಪರಿಣಾಮ ಈಗಿನ ಕರಾವಳಿ. ಎಲ್ಲರೂ ಭಾಗವಹಿಸುತ್ತಿದ್ದ ಕೋಲ, ನೇಮ, ಕಂಬಳ, ಜಾತ್ರೆ, ಉರುಸು ಇಂದು ಸೀಮಿತ ಕಾರ್ಯಕ್ರಮಗಳು ಸೀಮಿತವಾಗಿ ಬಿಟ್ಟಿದೆ.



    ಅಂದಿನ ಜೀವನ ಕ್ರಮವೂ ಚರಿತ್ರೆಗೆ ದಾಖಲಾಗಿದೆ ಎನ್ನುವು ಈ ಕಾದಂಬರಿಯ ಮೂಲಕವೆ ತಿಳಿಯುತ್ತದೆ. ಅಂತಹ ಜೀವನ ಈಗ ಕರಾವಳಿಯ ಅತ್ಯಂತ ಕುಗ್ರಾಮಗಳೆನಿಸಿದ ಕೆಲವು ಬೆರಳೆಣಿಕೆಯ ಊರಿನಲ್ಲಿ ಕಾಣಬಹುದು. ಹೊರತು ಪೇಟೆಯ ಸಖ್ಯ ಬೆಳೆಸಿಕೊಂಡಿರುವ ಯಾವ ಊರಿನಲ್ಲಿಯೂ ತುಳು ಸಂಸ್ಕøತಿಯ ಮೂಲ ಬೇರುಗಳು ಉಳಿದಿಲ್ಲ. ಅವೆಲ್ಲ ಸಮಾರಂಭದ ಒಂದೆರಡು ದಿನ ಸಂಭ್ರಮಿಸುವ ಆಟಿಕೆ ಅಥವಾ ಎಂಟರ್‍ಟೈನ್‍ಮೆಂಟ್, ಸೆಲೆಬ್ರೆಷನ್ ಎನ್ನುವ ಶಿರ್ಷಿಕೆಯಡಿ ಬರುವ ಅಣುಕು ಪ್ರದರ್ಶನಗಳಷ್ಟೇ. ಈ ಕಾದಂಬರಿ ಅಂದಿನ ತುಳುವರ ಜೀವನ ಕ್ರಮವನ್ನು ಓದುಗರ ಮುಂದೆ ತೆರೆದಿಡುತ್ತದೆ.
ಈ ಕಾದಂಬರಿ ಅನೇಕ ದೃಷ್ಟಿಯಿಂದ ಆ ಕಾಲಕ್ಕೂ ಈ ಕಾಲಕ್ಕೂ ಕೊಂಡಿಯಾಗುತ್ತದೆ ಎನ್ನುವುದು ಅನೇಕ ವಿಚಾರಗಳಿಂದ ತಿಳಿಯುತ್ತದೆ.    

    ಕಾದಂಬರಿಯಲ್ಲಿ ಬರುವ ತುಳುನಾಡಿನ ಆಹಾರ ಪದ್ಧತಿಯ ವಿವರವನ್ನು ಗಮನಿಸಿದರೆ ಇಂದು ಆ ಖಾದ್ಯ ವೈವಿದ್ಯವೆಲ್ಲ ಯಾವ ಗುಡ್ಡೆ ಹತ್ತಿದವು ಎನ್ನುವುದೆ ತಿಳಿಯುವುದಿಲ್ಲ. ಕಾದಂಬರಿ ಓದುತ್ತಿದ್ದಂತೆ ಇಡೀ ಕರಾವಳಿಯ ಆಹಾರ ಪದ್ದತಿ ಕಣ್ಣ ಮುಂದೆ ಹಾದು ಹೋಗುತ್ತದೆ. ಕಾಲಕ್ಕೆ ತಕ್ಕಂತೆ ಬದಲಾಗುವ ಆಹಾರ ಪದ್ದತಿ. ಅದರಲ್ಲೂ ಪ್ರಕೃತಿಯಲ್ಲಿ ದೊರಕುವ ಸಾಹಿತ್ಯಗಳಿಂದಲೆ ತಯಾರಾಗುವ ರುಚಿಕಟ್ಟಾದ ಅಡುಗೆಯ ವಿವರಗಳನ್ನು ಇಲ್ಲಿ ಸೂಕ್ಷ್ಮವಾಗಿ ತರಲಾಗಿದೆ. ಮೂಡೆ, ಹಲಸಿನ ಗಟ್ಟಿ, ಮಣ್ಣಿ, ಅಕ್ಕಿ ಕಡುಬು, ನೀರ್ ದೋಸೆ, ಪತ್ರೊಡೆ ಮುಂತಾದ ತುಳುನಾಡಿನ ವಿಶಿಷ್ಟ ಖಾದ್ಯಗಳ ವಿವರಗಳಿವೆ. ಇಲ್ಲಿ ಇಡೀ ತುಳುನಾಡಿನ ಆಹಾರದ ವೈವಿದ್ಯಗಳನ್ನು ನಿರೂಪಿಸಲಾಗಿಲ್ಲ, ಅದು ಕಾದಂಬರಿಯ ಉದ್ದೇಶವೂ ಅಲ್ಲ. ಆದರೆ ಆಹಾರ ವೈವಿದ್ಯದ ದರ್ಶನವಂತೂ ಇದೆ. 




    ಇನ್ನು ಕರಾವಳಿಯ ಆಚರಣೆಗಳು ತುಳುವರ ಮೈಗಂಟಿದ ಚರ್ಮದಂತೆ ಅವಿನಾಭಾವ ಸಂಬಂಧ ಹೊಂದಿರುವಂತದ್ದು. ಕೋಲ, ಕಂಬಳ, ಆಟ, ಜಾತ್ರೆ, ನೇಮ, ಮಾರ್ಣೆಮಿ ಮುಂತಾದವುಗಳು ಅಲ್ಲಿನ ಪ್ರತಿಯೊಬ್ಬನ ಜೀವನದಲ್ಲೂ ಹಾಸುಹೊಕ್ಕಾಗಿದೆ. ಬೇಸಗೆಯಲ್ಲಿ ಆಟ(ಯಕ್ಷಗಾನ)ದ ಗಮ್ಮತ್ತಾದರೆ, ಮಳೆಗಾಲದಲ್ಲಿ ತಾಳಮದ್ದಳೆ. ಇನ್ನು ಕಂಬಳವೆಂದರೆ ಇಡೀ ಊರಿಗೆ ಊರೆ ಸಂಭ್ರಮಿಸುವ ಕ್ಷಣವದು.  ಇದನ್ನು ಲೇಖಕಿಯೂ ಸಂಭ್ರಮದಿಂದಲೆ ಕಟ್ಟಿಕೊಟ್ಟಿದ್ದಾರೆ. ಇದರ ಜೊತೆಗೆ ತುಳುನಾಡಿನ ಕಾಲಕ್ಕೆ ಅನುಗುಣವಾಗಿ ಕೆಳಜಾತಿಯವರು ಕುಣಿಯುವ ಕುಣಿತಗಳ ಜೊತೆಗೆ ಅದರ ರೀತಿ ರಿವಾಜುಗಳನ್ನು ಕುರಿತು ಕಾದಂಬರಿಯಲ್ಲಿ ಕುಸುರಿ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕೆಲವೊಮ್ಮೆ ಆಚರಣೆಗಳ, ಸಂಪ್ರದಾಯಗಳ ಬಗ್ಗೆ ವಿವರಿಸುವಾಗ ಮೈಯೆಲ್ಲ ಕಣ್ಣಾಗಿರಬೇಕು ಅಲ್ಲಿ ಬರುವ ಪಾರಿಬಾಷಿಕ ಪದಗಳನ್ನು ವಿವೆಕಯುತವಾಗಿ ಬಳಸಬೇಕಾಗುತ್ತದೆ. ಕೋಲ, ಕಂಬಳ, ಕೋಳಿ ಅಂಕ, ನೇಮ ಮುಂತಾದ ಸಂದರ್ಭಗಳನ್ನು ವಿವರಿಸುವ ಸಂದರ್ಭ ಬಂದಾಗ ಪದಗಳ ನಿರ್ವಹಣೆಯೂ ಕಷ್ಟದಾಯಕವಾಗುತ್ತದೆ. ಸಾಹಿತ್ಯ ಸಂಸ್ಕøತಿಯ ಭಾಗವಾಗಿರುವುದರಿಂದ ತಪ್ಪು ವಿವರ ನಿರೂಪಣೆ ಅನಾಹುತಗಳಿಗೆ ಕಾರಣವಾಗುವ ಅಪಾಯವೂ ಇದೆ. ಇದೆಲ್ಲವನ್ನೂ ಲೇಖಕಿ ಬಹಳ ಸೊಗಸಾಗಿ ನಿರ್ವಹಿಸಿದ್ದಾರೆ. ಹೀಗಾಗಿಯೇ ಈ ಕೃತಿ  ಸಮೃದ್ಧ ಸಾಂಸ್ಕøತಿಕ ವಿವರಗಳಿಂದ ಮೈತುಂಬಿಕೊಂಡು ತುಳುವರ ಆತ್ಮಕಥನವಾಗಿಯೂ ನಮ್ಮೆದುರು ನಿಲ್ಲುತ್ತದೆ. ಅನ್ಯ ಸಂಸ್ಕøತಿಯವರಿಗೆ ತುಳು ಸಂಸ್ಕøತಿಯನ್ನು ಬಹಳ ಅರ್ಥಪೂರ್ಣವಾಗಿ ಪರಿಚಯಿಸುತ್ತದೆ. 



    ಕರಾವಳಿಯ ಜೀವನವೂ ಇತರೆಡೆಗಳಂತೆ ಜಾತಿ ವ್ಯವಸ್ಥೆಯನ್ನು ತನ್ನೊಳು ಕರಗತಮಾಡಿಕೊಂಡ ಸಂಸ್ಕøತಿ. ಮೆಲ್ನೋಟದಲ್ಲಿ ಒಂದೇ ಭಾಷೆ, ಸಂಸ್ಕøತಿಯ ಜೊತೆ ಥಳುಕು ಹಾಕಿಕೊಂಡರೂ ಒಳ ಹೊಕ್ಕಂತೆ ಅದರೊಳಗಿನ ಭೇದಗಳು ಕಾಣಿಸುತ್ತದೆ. ಇಲ್ಲೂ ಮಡಿ ಮೈಲಿಗೆಯಿದೆ, ವಿಧಿ-ನಿಷೆದಗಳಿವೆ, ಸಹಕಾರ- ಪ್ರತಿರೋಧಗಳಿವೆ. ಆ ಕಾಲದಲ್ಲಿ ಕರಾವಳಿಯು ಬ್ರಿಟಿಷರ ನೇರವಾದ ಆಡಳಿತಕ್ಕೆ ಒಳಪಟ್ಟಿದ್ದರೂ ಆರಂಭದಲ್ಲಿ ಜಾತಿ ವ್ಯವಸ್ಥೆಗಳು ಪ್ರಬಲವಾಗಿದ್ದವು ಎನ್ನುವುದನ್ನು ಈ ಕಾದಂಬರಿ ಸಮರ್ಥವಾಗಿ ಕಟ್ಟಿಕೊಡುತ್ತದೆ. ಈ ವಿವರಗಳು ಕಾರಂತರ ‘ಚೋಮನ ದುಡಿ’ ಸಂದರ್ಭದಲ್ಲೂ ಕಾಣಬಹುದಾಗಿದೆ. ಈ ಕಾದಂಬರಿ ಕರಾವಳಿಯ ಎಲ್ಲಾ ವಿವರಗಳನ್ನು ಒಳಗೊಂಡಿದ್ದರೂ ಕೆಲವೊಂದು ಆಚರಣೆಗಳ ಸಂದರ್ಭದಲ್ಲಿ ಕೆಲವು ಜಾತಿಗಳ ವಿವರಗಳು ಬರಲಿಲ್ಲ. ಯಾವ ಕಾರಣಕ್ಕಾಗಿ ತಪ್ಪಿದವು ಎನ್ನುವದನ್ನು ತಿಳಿಯಲು ಲೇಖಕಿಯ ಕಡೆಗೆ ಮುಖಮಾಡಬೇಕಷ್ಟೇ. ಇಲ್ಲಿ ಜಾತಿಯ ವಿವರ ಕಾಣೆಯಾಗಿದೆ ಎನ್ನಲು ಕಾರಣವೆಂದರೆ ಕರಾವಳಿಯಲ್ಲಿ ಕೆಲವು ಜಾತಿಯವರು ಕೆಲವೊಂದು ಆಚರಣೆಗಳಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಾರೆ. ಅಂತಹ ಆಚರಣೆಗಳ ವಿವರಗಳಿವೆ ಆದರೆ ಜಾತಿಗಳು ಕಾಣೆಯಾಗಿವೆ ಅನ್ನುವುದು ಮಾತ್ರ ಸತ್ಯ. ಇಲ್ಲಿ ಬಂದಿರುವ ವಿವಿಧ ವರ್ಗ, ಜಾತಿಯ ಪ್ರಸ್ತಾಪಗಳು ತುಳುನಾಡಿನ ಆ ಕಾಲದ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಲೇಖಕಿ ಒಂದುಕಡೆ “ಈ ಕೃತಿಯಲ್ಲಿ ನಾನು ಯಾವುದೇ ರೀತಿಯ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದ ಯಾವುದೇ ವರ್ಗವನ್ನು ಅಥವಾ ಪಾತ್ರವನ್ನಾಗಲಿ ಎಳೆದು ತಂದಿಲ್ಲ” ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಅಂದರೆ ಸೃಜನಶೀಲತೆಯ ಭಾಗವಾಗಿ ಕಲ್ಪಿಸಿಕೊಂಡು ಒಂದು ಜಾತಿಯನ್ನು, ವರ್ಗವನ್ನು, ಹಿಯಾಳಿಸಿದ, ಎತ್ತರಕ್ಕೇರಿಸಿದ ಅಂಶಗಳಿಲ್ಲ. ಈ ಕಾರಣಕ್ಕಾಗಿಯೇ ನಾಗವೇಣಿಯವರ ಬರವಣಿಗೆಯ ದಾಟಿ ಇಲ್ಲಿ ಮುಖ್ಯವಾಗುತ್ತದೆ. ಇಲ್ಲಿ ಕಥೆಯ ಜೊತೆ ಜೊತೆಗೆ ಜಾತಿಗಂಟಿಕೊಂಡು ಬರುವ ಕೊಂಕು, ಸಿಟ್ಟು, ಸೆಡವು, ದರ್ಪ, ಮಾತ್ಸರ್ಯ, ಹತಾಶೆ, ಸೋಲು, ಅಸಾಹಯಕತೆಗಳ ವಿವರವಿದೆ. ಇಲ್ಲಿ ಯಾವುದನ್ನೂ ವ್ಯಂಗ್ಯವಾಡಿಲ್ಲ, ಅಳತೆಮೀರಿ ವಿವರಗಳು ಬಂದಿಲ್ಲವೆಂಬುದನ್ನು ಗಮನಿಸಬಹುದು. ಈ ಕಾದಂಬರಿ ರಚನೆಯಾದ ನಂತರದಲ್ಲಿ ಈ ಜಾತಿಗಳ ಎಷ್ಟೋ ಕಂದಾಚಾರಗಳು ನೇತ್ರವತಿಯ ಬೊಳ್ಳದೊಂದಿಗೆ ಕಡಲು ಸೇರಿದೆ. ಜೊತೆಗೆ ಪ್ರತಿ ಮಳೆಗಾಲದಲ್ಲೂ ಮಳೆತರುವ ಮೋಡ ಹೊಸ ನೀರಿನ ಜೊತೆಗೆ ಕೆಲವು ಹೊಸತನ್ನು ತಂದು ಸುರುವಿದೆ. ಹೀಗಾಗಿ ಹಿಂದೆ ಹುಳುಕಿದ್ದ ಜಾಗದಲ್ಲಿ ಈಗ ಹುಣ್ಣುಗಳು ಎದ್ದಿವೆ ಅಷ್ಟೇ.



    ಕಾದಂಬರಿಯ ಭಾಷೆಯ ವಿಚಾರದ ಬಗ್ಗೆ ನಾಲ್ಕು ಮಾತು ಹೇಳಬೇಕು. ಉತ್ತರ ಕರ್ನಾಟಕದಲ್ಲಿ ಪಕ್ಕಾ ಉತ್ತರ ಕರ್ನಾಟಕದ ಕನ್ನಡವನ್ನು ಮಾತನಾಡಿದರೆ ಜವಾರಿ ಭಾಷೆ ಎಂದು ಕರೆಯುತ್ತಾರೆ. ಈ ಕಾದಂಬರಿಯಲ್ಲಿ ಕರಾವಳಿಯ ಜವಾರಿ ಕನ್ನಡ ಬಳಕೆಯಾಗಿದೆ. ಈ ಬಳಕೆ ಹೇಗಿದೆಯೆಂದರೆ ಕರಾವಳಿಯ ಓದುಗರಿಗೆ ಪರಮಾನ್ನದಲ್ಲಿ ದ್ರಾಕ್ಷಿ, ಗೋಡಂಬಿ ಸಿಕ್ಕಾಗ ರುಚಿ ಹೆಚ್ಚಾದಂತೆ ಕಂಡರೆ. ಉತ್ತರ ಕರ್ನಾಟಕದ ಮಂದಿಗೆ ಕಡಲೆಯಲ್ಲಿ ಸೇರಿಕೊಂಡ ಕಲ್ಲನ್ನು ಜಗಿದಂತಾಗಬಹುದು. ಕಾರಂತರ ಕಾದಂಬರಿಯೇ ಅರ್ಥವಾಗಲ್ಲ ಎನ್ನುವವರ ಮಧ್ಯೆ ಇದು ಭಾಷೆಯ ದೃಷ್ಟಿಯಿಂದ ಕೊಂಚ ತೊಡಕಾಗಬಹುದು. ಆದರೆ ಇದು ಕಥೆಯ ನಿರಂತರತೆಯನ್ನು, ಓದುವಿಕೆಯನ್ನು ಎಲ್ಲೂ ತಡೆದು ನಿಲ್ಲಿಸುವುದಿಲ್ಲ. ತುಳುವಿನ ಅನೇಕ ವಿಶಿಷ್ಟ ಪದಗಳು ಇಲ್ಲಿ ಬಳಕೆಯಾಗಿದೆ. ಬೈಪಾಣೆ, ಬೈದೆತಿ, ಉಳ್ಳಾಯ. ಪೊಳಲಿ ಚೆಂಡು, ಏಣೆಲ್, ಕೊಳಕ್ಕೆ, ಗುತ್ತಿನಾರ್, ಆಟಿ, ಭೇಷ, ಕೆಡ್ಡಸ, ಕುಡು-ಅರಿ, ದಡ್ಡಾಲ್ ನಾರ್, ಬಾರಣೆ ಮುಂತಾದ ಪದಗಳಿಗೆ ಕರಾವಳಿಯಲ್ಲಿ ಸಾಂಸ್ಕøತಿಕ ಮಹತ್ವವಿದೆ. ಇಂತಹ ಪದಗಳ ಜೊತೆಗೆ ಕರಾವಳಿಯ ತುಳು ಲೇಪಿತ ಕನ್ನಡದ ಬಳಕೆಯನ್ನು ಕಾದಂಬರಿಯ ಉದ್ದಕ್ಕೂ ಕಾಣಬಹುದಾಗಿದೆ. ಕಾದಂಬರಿಯಲ್ಲಿ ಬರುವ ಪಾತ್ರಗಳ ಹೆಸರೂ ಕರಾವಳಿಯ ಜನರ ಬಾಯಲ್ಲಿ ಹಿಂದೆ ನಿತ್ಯ ನಲಿದಾಡುತ್ತಿದ್ದ ಈಗ ಅಪರೂಪಕ್ಕೆ ಕಾಣಸಿಗುವ ಹೆಸರುಗಳಾಗಿವೆ. ಪಿಜಿನ, ಐತಪ್ಪ, ಅಂತಪ್ಪ, ಬೊಗ್ಗು, ಪಾಂಡು, ತೌಡ ಮುಂತಾದವು ಈಗ ವಿರಳಾತಿವಿರಳವಾಗಿ ಕಾಣುವ, ತುಳುನಾಡಿನಲ್ಲಿ ಹಿಂದೆ ಬಳಕೆಯಲ್ಲಿದ್ದ ಜವಾರಿ ಹೆಸರುಗಳಾಗಿವೆ. 


    ಇಲ್ಲಿ ಸ್ತ್ರೀವಾದದ ಎಳೆಯನ್ನೂ ಲೇಖಕಿ ಗಾಂಧಿಯ ಚರಕದಲ್ಲಿ ನೂಲಿ ಕಥನದಲ್ಲಿ ಹೆಣೆದಿದ್ದಾರೆ. ಆ ಎಳೆಯನ್ನು ದ್ರೌಪದಿಯ ಬದುಕಿನ ಮೂಲಕ, ದಾರುವಿನ ಜೀವನದ ಮೂಲಕ, ಪುಟ್ಟಮ್ಮಕ್ಕನ ಅನಿಯಾರ್ಯತೆಯಲ್ಲಿ ಗಮನಿಸಬಹುದು. ದ್ರೌಪದಿ ಒಂದು ಸಂದರ್ಭದಲ್ಲಿ “ಇಷ್ಟು ದಿನ ತಾನು ತನಗಾಗಿ ಬದುಕಲೇ ಇಲ್ಲ. ಅಪ್ಪಯ್ಯನಿಗಾಗಿ ಅಪ್ಪಯ್ಯನ ಸುರಗೀ ಮಠಕ್ಕಾಗಿ ಬದುಕಿದೆ. ಸನಾತನ ಧರ್ಮಶಾಸ್ತ್ರಕ್ಕಾಗಿ ಬದುಕಿದೆ. ಇನ್ನು ಅಪ್ಪಯ್ಯ ಕೊಂದರೂ ಸರಿಯೇ ನನಗಾಗಿ ಬದುಕುವುದೇ ಸಮ” ಎನ್ನುವ ಆಕೆಯ ನಿರ್ಧಾರ ಆಕೆಯ ಮುಂದಿನ ಪ್ರೀತಿಗೆ, ಆ ಮೂಲಕ ಜೀವನಕ್ಕೆ ದಾರಿಯಾಗುತ್ತದೆ. ಆ ಕ್ಷಣದಲ್ಲಿ ಆಕೆ ತನ್ನ ಮನಸ್ಸನ್ನು ಅದ್ರಾಮನಿಗೆ ಒಪ್ಪಿಸುತ್ತಾಳೆ. ಹೀಗೆ ಸ್ತ್ರೀಯು ವ್ಯವಸ್ಥೆಯ ಕೆಟ್ಟ ಚಾಳಿಯ ವಿರುದ್ದ ಬಂಡೇಳುವ ರೀತಿಯನ್ನು, ಆ ಸಂದರ್ಭವನ್ನು ಲೇಖಕಿ ಕಟ್ಟಿಕೊಡುವುದರ ಮೂಲಕ ಸಾಧ್ಯತೆಗಳನ್ನು ತೆರೆದಿಡುತ್ತಾರೆ. ಜೊತೆಗೆ ದೈಹಿಕ ಕಾಮನೆಗಳನ್ನು ನಿರ್ವಹಿಸುವ ಬಗ್ಗೆ ಮಾರಪ್ಪನ ಮಾತು ಬಹಳ ಮುಖ್ಯವಾಗುತ್ತದೆ. ಆತ ಹೆಬ್ಬಾರರ ಬಳಿ ದ್ರೌಪದಿ ಅದ್ರಾಮರ ವಿಚಾರದ ಬಗ್ಗೆ ಮಾತನಾಡುವಾಗ “ಹೆಬ್ಬಾರರೆ ನಿಮ್ಮ ಶಾಸ್ತ್ರದಲ್ಲಿ ಕಾಮ ಪರಿಹಾರಕ್ಕಾಗಿ ಮಂತ್ರಗಿಂತ್ರ ಏನಾದರು ಹೇಳಿದ್ದಾರಾ?” ಎಂದು ಕೇಳಿದ ಪ್ರಶ್ನೆ ವಿಧಿ ನಿಷೆದಗಳ ಮೂಲಕ ದೈಹಿಕ ಭಾವನೆಗಳನ್ನು ನಿಯಂತ್ರಿಸುವ ಸಮಾಜದ ನಡವಳಿಕೆಗೆ ಚಾಟಿ ಬೀಸುತ್ತದೆ. ಅಲ್ಲದೆ ಪುಟ್ಟಮಕ್ಕನ ಅನಿವಾರ್ಯತೆಯನ್ನು ಹೆಬ್ಬಾರರು ಬಳಸಿಕೊಳ್ಳುವ ಪರಿಯನ್ನೂ ಇಲ್ಲಿ ಚಿತ್ರಿಸಿದ್ದಾರೆ. ಇಲ್ಲಿ ಮುಖ್ಯವಾಗಿ ದಾರುವಿನ ಜೀವನವನ್ನು ಗಮನಿಸಬೇಕಾಗುತ್ತದೆ. ದಾರು ಮಂಗಳಮುಖಿಯಾದರೂ ಮದುವೆ ಮತ್ತು ದಾಂಪತ್ಯದ ಆಸೆಯನ್ನು ಕಾಣುತ್ತಾಳೆ, ಅದಕ್ಕಾಗಿ ಹಂಬಲಿಸುತ್ತಾಳೆ. ಕೊನೆಗೂ ಆಕೆಯ ಆಸೆಯನ್ನು ಮಾರಪ್ಪ ಪೂರೈಸುತ್ತಾನೆ. ಇಲ್ಲಿ ಲೇಖಕಿ ಮಂಗಳಮುಖಿಯೊಬ್ಬಳಿಗೆ ಸಂಸಾರದ ಸುಖವನ್ನು ಪ್ರ್ರಾಪ್ತಿ ಮಾಡುವ ಮೂಲಕ ಹೊಸ ಸಾಧ್ಯತೆಯನ್ನು ತೆರೆದಿಡುತ್ತಾರೆ. ಹೀಗೆ ಕಾದಂಬರಿ ಸ್ತ್ರೀವಾದಿ ನೆಲೆಯಿಂದಲೂ ಮುಖ್ಯವಾಗುವುದನ್ನು ಗಮನಿಸಬಹುದಾಗಿದೆ.




    ಇನ್ನು ಕಾದಂಬರಿಯ ಒಟ್ಟಂದದ ಬಗ್ಗೆ ಹೇಳಬೇಕೆಂದರೆ “ಇಲ್ಲಿ ಗಾಂಧಿ ಒಬ್ಬ ಹೆಸರು ಮಾತ್ರವಾಗಿರದೆ ಬದಲಾವಣೆಯ ಸಂಕೇತವಾಗಿಬಿಟ್ಟಿದೆ.   ಒಟ್ಟಾರೆ ಜನ ಜೀವನದಲ್ಲಿ ನಿರ್ಧಿಷ್ಟ ಕಾಲಮಾನವೊಂದರಲ್ಲಿ ನಡೆದ ಸಾಮಾಜಿಕ ಪರಿವರ್ತನೆಯನ್ನು ಕಾದಂಬರಿ ಧ್ವನಿಪೂರ್ಣವಾಗಿ ಕಟ್ಟಿಕೊಡುತ್ತದೆ.” ಎನ್ನುವ ಮರುಳಸಿದ್ಧಪ್ಪನವರ ಮಾತುಗಳು ಒಪ್ಪತಕ್ಕುದಾಗಿದೆ. ಇಲ್ಲಿ ಗಾಂಧಿ ಬದಲಾವಣೆಯ ಸಂಕೇತವಾಗಿದ್ದಾರೆ. ಗಾಂಧಿ ವಿಚಾರಧಾರೆಗಳು ಚಲನಶೀಲ ಸಮಾಜವೊಂದರ ಪರಿವರ್ತನೆಗೆ ಕಾರಣವಾಗುವ ಮೂಲಕ ಹೊಸ ದಿಶೆಯೆಡೆಗೆ ನಡೆಯುವುದನ್ನು ನಾವಿಲ್ಲಿ ಮುಖ್ಯವಾಗಿ ಗಮನಿಸಬಹುದಾಗಿದೆ. ಆದ್ದರಿಂದ ಇದನ್ನು ಗ್ರಹಿಸುವಾಗ ಆ ಕಾಲಘಟ್ಟದ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ. ಲೇಖಕಿಯೆ ಹೇಳುವಂತೆ ಈ ಕಾದಂಬರಿ ಮೂರು ತಲೆಮಾರುಗಳ ಕಥೆಯನ್ನು ಹೇಳುತ್ತದೆ. ಇಂತಹ ಕಾದಂಬರಿ ಕರಾವಳಿಯಲ್ಲೆ ಇದಕ್ಕಿಂತ ಮೊದಲು ರೂಪುಗೊಂಡಿತ್ತು. ಮತ್ತು ಅದು ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದಾಗಿದೆ. ಆ ಕೃತಿ ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿ. ‘ಮರಳಿ ಮಣ್ಣಿಗೆ’ ಕಾದಂಬರಿ ಕರಾವಳಿಯ ಬದುಕನ್ನು ‘ಗಾಂಧಿ ಬಂದ’ ಕಾದಂಬರಿಯ ಮಟ್ಟಿಗೆ ಕಟ್ಟಿಕೊಡಲಿಲ್ಲ. ಆದರೆ ಸತ್ವದಲ್ಲಿ, ಮೌಲ್ಯದಲ್ಲಿ ಎರಡೂ ಕೃತಿಗಳು ಸಮಾನತೋಕವುಳ್ಳ ಕೃತಿಗಳಾಗಿವೆ. 


    ಕಾದಂಬರಿಯಲ್ಲಿ ಪಾತ್ರಗಳ ಹೆಸರುಗಳು ಕುತೂಹಲಕಾರಿಯಾಗಿವೆ. ಗಾಂಧಿ, ದ್ರೌಪದಿ, ಮಾರಪ್ಪ, ತಮ್ಮ ಹೆಸರಿನಲ್ಲೆ ಜೀವಂತಿಕೆಯನ್ನು ತುಂಬಿಕೊಂಡಿವೆ ಪಾತ್ರಗಳಲ್ಲೂ ಭೂತಕ್ಕೂ, ವರ್ತಮಾನಕ್ಕೂ ಸಂಬಂಧಗಳೂ ಗೋಚರಿಸತ್ತವೆ. ಗಾಂಧಿ ಹೆಸರು ಸದ್ಯದ ಮಟ್ಟಿಗಂತೂ ಪ್ರತಿಮೆಯಾಗಿದೆ, ಸ್ಥಾವರರೂಪದಲ್ಲಿದೆ ಅದಕ್ಕೆ ಕಾದಂಬರಿ ಕಾಲದ ನೆಲೆಯಲ್ಲಿ ಚಲನೆಯನ್ನು ಕೊಟ್ಟಿದೆ. ಆ ಮೂಲಕ ಗಾಂಧಿಯನ್ನು ವರ್ತಮಾನಕ್ಕೆ ತಂದಿದ್ದಾರೆ. ದ್ರೌಪದಿ ಪುರಾಣ ಕಾವ್ಯದಲ್ಲಿ ಒಂದಕ್ಕಿಂತ ಹೆಚ್ಚು ಗಂಡಂದಿರ ಜೊತೆ ಜೀವನ ನಡೆಸಿದವಳು. ಕಾದಂಬರಿಯ ಮುಖ್ಯ ಪಾತ್ರ ದ್ರೌಪದಿ ಇಬ್ಬರ ಕೈ ಹಿಡಿಯುತ್ತಾಳೆ. ಸೊಂಪಾಗಿ ಬೆಳೆದ ಮರ ಬಿಸಿಲ ತಾಪಕ್ಕೆ ಒಣಗಿದಂತೆ ಕೊರಡು ಕೊಂಬೆಯಾಗುತ್ತಾಳೆ. ಮತ್ತೆ ಮಳೆಯ ಸಿಂಚನದಿ ಚಿಗುರುವಂತೆ ಅದ್ರಾಮನ ಜೊತೆಗೆ ದಾಂಪತ್ಯದಲ್ಲಿ ಮತ್ತೆ ಲಯಕೆ ಮರಳುತ್ತಾಳೆ. ಮಾರಪ್ಪನ ಪಾತ್ರವಂತೂ ಬಹಳ ಚಿತ್ರವತ್ತಾಗಿ ಮೂಡಿ ಬಂದಿದೆ. ಆತನ ಹೆಸರಿನಲ್ಲೆ ‘ಮಾರ್’(ಹೊಡೆತ) ಇರುವುದರಿಂದ ಸಮಾಜದ ಕಂದಾಚಾರ, ಮೂಢನಂಬಿಕೆಗಳಿಗೆ ಆತ ‘ಮಾರ್’ ಆಗಿಯೇ ಪರಿಣಮಿಸುತ್ತಾನೆ. ಬ್ರಿಟಿಷರ ದುರಾಡಳಿತಕ್ಕೆ ಮಾರಕವಾಗುತ್ತಾನೆ. ಮಂಗಳಮುಖಿಯೊಬ್ಬಳನ್ನು ಮದುವೆಯಾಗುವ ಮೂಲಕ ಜನರ ನಂಬಿಕೆಗಳಿಗೆ ಬಲವಾದ ಪೆಟ್ಟು ನೀಡಿ ಹೊಸ ಬದಲಾವಣೆಗೆ ಕಾರಣವಾಗುತ್ತಾನೆ. ದೇಶಿ ಬಟ್ಟೆಯ ಪ್ರಚಾರದ ಮೂಲಕ ಪರದೇಶಿ ಸರಕುಗಳಿಗೆ ಮಾರಕವಾಗುತ್ತಾನೆ. ಹೀಗೆ ಇಲ್ಲಿನ ಪಾತ್ರಚಿತ್ರಣಗಳು ಕೂಡಾ ಬಹಳ ಕೂತೂಹಲಕಾರಿಯಾಗಿವೆ.
    ಇಡೀ ಕಾದಂಬರಿ ಅದ್ರಾಮ ದ್ರೌಪದಿಯನ್ನು ಕೇಂದ್ರಿತವಾಗಿದ್ದರೂ ಅದರ ಸುತ್ತ ಹೆಣೆದುಕೊಂಡಿರುವ ಕಥೆ ಇಡೀ ಕಾದಂಬರಿಯನ್ನು ಇನ್ನೊಂದು ಮಜಲಿಗೆ ಒಯ್ಯುತ್ತದೆ. ಕಾದಂಬರಿಯ ಸಂವಿಧಾನ ಬಹಳ ಸಮರ್ಥವಾಗಿರುವುದರಿಂದ ಅದು ಅರ್ಥಪೂರ್ಣವಾಗಿ ತನ್ನ ಗುರಿಯನ್ನು ಸಾಧಿಸುತ್ತದೆ. ಈ ಕಾದಂಬರಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ರಚನೆಯಾಗಿರುವ  ಉತ್ತಮ ಕಾದಂಬರಿಯ ಸಾಲಿನಲ್ಲಿ ನಿಲ್ಲುವ ಎಲ್ಲಾ ಗುಣಗಳಿವೆ. ಕರಾವಳಿಯ ಕಥನ ಎನ್ನುವುದರ ಜೊತೆಗೆ ತುಳು ಸಂಸ್ಕøತಿಯ ಕೈಪಿಡಿಯಾಗಿಯೂ ಈ ಕಾದಂಬರಿ ಮಹತ್ವದ್ದು. ಕರಾವಳಿ ಮಣ್ಣಿನ ಕಥನದಲ್ಲಿ ಲೇಖಕಿ ತನ್ನ ಸಾಮಥ್ರ್ಯವನ್ನು ವಿಶಿಷ್ಟ ರೀತಿಯಲ್ಲಿ ಮೆರೆದಿದ್ದಾರೆ ಎಂದರೆ ತಪ್ಪಗಲಾರದು.






                                                                                                      :-ಪ್ರಶಾಂತ್ ದಿಡುಪೆ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಹುಮುಖಿ ಪ್ರತಿಭೆ ಕೆ.ಪಿ ತೇಜಸ್ವಿಯವರ ಬದುಕು ಬರಹ

ಸಮತೆಯ ಕಟ್ಟು