ನೀರ ಹಸಿವು

ದೇರಪ್ಪನ ಮನೆಯ ಹಿತ್ತಲಿಗೆ ಸಂಜೆಯ ವೇಳೆಗೆ ಎರಡು ಲಾರಿಗಳು ಬಂದು ನಿಂತವು. ಅದರಿಂದ ಅನ್ಯಗ್ರಹಗಳಿಂದ ಬಂದಂತಿದ್ದ ಹತ್ತರಿಂದ ಹದಿನೈದು ಜನ ಇಳಿದರು. ದೇಹಪೂರ್ತಿ ಕಂದು ಬಣ್ಣದ ಧೂಳು, ಹರಕಲು ಅಂಗಿ, ಮೊಟುದ್ದ ಪ್ಯಾಂಟು, ಇನ್ನೂ ಕೆಲವರು ಬೈರಾಸಲ್ಲೆ1 ಮಾನ ಮುಚ್ಚಿಕೊಂಡಿದ್ದರು. ಲಾರಿಯಿಂದ ಸ್ಟವ್ ಕೆಳಗಿಳಿಸಿದವರೆ ಅಲ್ಲೆ ಅನ್ನಕ್ಕೆ ನೀರಿಟ್ಟರು. ಕೆಲವರು ಇತರೆ ಕೆಲಸದಲ್ಲಿ ತೊಡಗಿಕೊಂಡರು. ತುಕ್ರ ಪೂಜಾರಿಯ ಗಡಂಗಿಗೆ2 ಹೋಗಿದ್ದ ಟೋಕ್ಕಯ್ಯ ಇದನ್ನೆ ನಿಂತು ನೋಡುತ್ತಿದ್ದ. ಆತ ದೇರಪ್ಪನ ಮನೆಗೆ ಯಾರೊ ಒಕ್ಕಲಿನವರು ಬಂದಿದ್ದಾರೆ ಎಂದೆ ಭಾವಿಸಿದ. ತುಕ್ರ ಪೂಜಾರಿಯ ಗಡಂಗಿಗೆ ಕಳ್ಳು ಸಪ್ಲೈ ಮಾಡುವುದು ಕೂಚ ಪೂಜಾರಿ. ಆತ ಬೇಡಿಕೆಗೆ ತಕ್ಕಂತೆ ನೀರನ್ನು ಧಾರಳವಾಗಿ ಬೆರೆಸುತ್ತಿದ್ದ. ಟೋಕ್ಕಯ್ಯನಿಗೆ ಕಳ್ಳು ಕುಡಿರೆ ಜುಲಾಬು3 ಶುರುವಾಗುತ್ತದೆ. ರಾತ್ರಿ ನಿಶೆಯೇರದಿದ್ದರೆ ಹೆಂಡತಿಯ ಜೊತೆ ಮಾತಾಡುವ ತಾಕತ್ತೇ ಇರುತ್ತಿರಲಿಲ್ಲ. ಆದ್ದರಿಂದ ನಿತ್ಯ ಧರ್ಣಪ್ಪನ ಅಂಗಡಿಯ ಕಂಟ್ರಿ4 ಕುಡಿಯುವವನಿಗೆ ಇವತ್ತು ದುಡ್ಡು ಸಾಲದೆ ತುಕ್ರ ಪೂಜಾರಿಗೆ ದರುಶನ ನೀಡಿ ಬಂದಿದ್ದ. ರಾತ್ರಿ ಕಳ್ಳಿನ ಉಪದ್ರದಿಂದ ಗಡಿ ಗಡಿ ಚೊಂಬು ಹಿಡಿದು ಹಿತ್ತಲಿಗೊಮ್ಮೆ ಹೋಗುತ್ತಿದ್ದ. ರಾತ್ರಿ ಹೀಗೆ ಹಿತ್ತಲಲ್ಲಿ ಸಣ್ಣ ಲೈಟೊಂದನ್ನು ಹಿಡಿದುಕೊಂಡು, ಚೊಂಬನ್ನು ಎದುರಿಗಿಟ್ಟು ತುಕ್ರÀ ಪೂಜಾರಿಗೆ ಬೈಯುತ್ತಾ ಕುಳಿತಿದ್ದ. ಇದ್ದಕ್ಕಿಂದ್ದಂತೆ ‘ಸೊಂಯ್....’...