ನೀರ ಹಸಿವು



ದೇರಪ್ಪನ ಮನೆಯ ಹಿತ್ತಲಿಗೆ ಸಂಜೆಯ ವೇಳೆಗೆ ಎರಡು ಲಾರಿಗಳು ಬಂದು ನಿಂತವು. ಅದರಿಂದ ಅನ್ಯಗ್ರಹಗಳಿಂದ ಬಂದಂತಿದ್ದ ಹತ್ತರಿಂದ ಹದಿನೈದು ಜನ ಇಳಿದರು. ದೇಹಪೂರ್ತಿ ಕಂದು ಬಣ್ಣದ ಧೂಳು, ಹರಕಲು ಅಂಗಿ, ಮೊಟುದ್ದ ಪ್ಯಾಂಟು, ಇನ್ನೂ ಕೆಲವರು ಬೈರಾಸಲ್ಲೆ1 ಮಾನ ಮುಚ್ಚಿಕೊಂಡಿದ್ದರು. ಲಾರಿಯಿಂದ ಸ್ಟವ್ ಕೆಳಗಿಳಿಸಿದವರೆ ಅಲ್ಲೆ ಅನ್ನಕ್ಕೆ ನೀರಿಟ್ಟರು. ಕೆಲವರು ಇತರೆ ಕೆಲಸದಲ್ಲಿ ತೊಡಗಿಕೊಂಡರು. ತುಕ್ರ ಪೂಜಾರಿಯ ಗಡಂಗಿಗೆ2 ಹೋಗಿದ್ದ ಟೋಕ್ಕಯ್ಯ ಇದನ್ನೆ ನಿಂತು ನೋಡುತ್ತಿದ್ದ. ಆತ ದೇರಪ್ಪನ ಮನೆಗೆ ಯಾರೊ ಒಕ್ಕಲಿನವರು ಬಂದಿದ್ದಾರೆ ಎಂದೆ ಭಾವಿಸಿದ.
    ತುಕ್ರ ಪೂಜಾರಿಯ ಗಡಂಗಿಗೆ ಕಳ್ಳು ಸಪ್ಲೈ ಮಾಡುವುದು ಕೂಚ ಪೂಜಾರಿ. ಆತ ಬೇಡಿಕೆಗೆ ತಕ್ಕಂತೆ ನೀರನ್ನು ಧಾರಳವಾಗಿ ಬೆರೆಸುತ್ತಿದ್ದ. ಟೋಕ್ಕಯ್ಯನಿಗೆ ಕಳ್ಳು ಕುಡಿರೆ ಜುಲಾಬು3 ಶುರುವಾಗುತ್ತದೆ. ರಾತ್ರಿ ನಿಶೆಯೇರದಿದ್ದರೆ ಹೆಂಡತಿಯ ಜೊತೆ ಮಾತಾಡುವ ತಾಕತ್ತೇ ಇರುತ್ತಿರಲಿಲ್ಲ. ಆದ್ದರಿಂದ ನಿತ್ಯ ಧರ್ಣಪ್ಪನ ಅಂಗಡಿಯ ಕಂಟ್ರಿ4 ಕುಡಿಯುವವನಿಗೆ ಇವತ್ತು ದುಡ್ಡು ಸಾಲದೆ ತುಕ್ರ ಪೂಜಾರಿಗೆ ದರುಶನ ನೀಡಿ ಬಂದಿದ್ದ. ರಾತ್ರಿ ಕಳ್ಳಿನ ಉಪದ್ರದಿಂದ  ಗಡಿ ಗಡಿ ಚೊಂಬು ಹಿಡಿದು ಹಿತ್ತಲಿಗೊಮ್ಮೆ ಹೋಗುತ್ತಿದ್ದ. ರಾತ್ರಿ ಹೀಗೆ ಹಿತ್ತಲಲ್ಲಿ ಸಣ್ಣ ಲೈಟೊಂದನ್ನು ಹಿಡಿದುಕೊಂಡು, ಚೊಂಬನ್ನು ಎದುರಿಗಿಟ್ಟು ತುಕ್ರÀ ಪೂಜಾರಿಗೆ ಬೈಯುತ್ತಾ ಕುಳಿತಿದ್ದ. ಇದ್ದಕ್ಕಿಂದ್ದಂತೆ ‘ಸೊಂಯ್....’ ಎನ್ನುವ ವಿಚಿತ್ರ ಸದ್ದಾಯಿತು, ಈತನ ಜೀವಮಾನದಲ್ಲೇ ಕೇಳರಿಯದ ಸದ್ದದು. ಹೆದರಿ ತಡಬಡಿಸಿಕೊಂಡು ಬಂದ ಮುಖ ಸಣ್ಣಗೆ ಬೆವರಿತು. ಬಂದು ಮನೆಯ ತಿಟ್ಟೆಯಲ್ಲಿ ಕುಳಿತ. ಕಳ್ಳಿನ ಕರೆ ಮತ್ತೆ ಬಂದುದರಿಂದ ಮತ್ತೆ ಹಿತ್ತಲಿಗೆ ಹೋಗಬೇಕಿತ್ತು. ಏನು ಮಾಡುವುದು ಮೊದಲೆ ವಿಚಿತ್ರ ಸದ್ದಿನ ಭಯ. ಈ ವರ್ಷ ಜುಮಾದಿಗೆ ಅಗೆಲು ಕೊಡದೆ ಇದ್ದದರಿಂದಲೆ ನನಗೆ ಬೆದರಿಸುತ್ತಿದೆ ಎಂದು ನಂಬಿದ. ರಾತ್ರಿಯಾದ್ದರಿಂದ ಸೊಂಟದಿಂದ ಮೇಲಿನ ಭಾಗಕ್ಕೆ ಬನೀನು ಹಾಕಿದ್ದ, ಸೊಂಟದಿಂದ ಕೆಳಗಿನ ಭಾಗಕ್ಕೆ ಬೈರಾಸು ಸುತ್ತಿಕೊಂಡಿದ್ದ. ಬಾಯಲ್ಲಿ ತುಂಡು ಬೀಡಿ, ಅದೂ ಎಂಜಲಿನಿಂದ ಗಳಿಗೆಗೊಮ್ಮೆ ಆರುತ್ತಿತ್ತು. ಮತ್ತೆ ಹೊತ್ತಿಸುತ್ತಿದ್ದ. ದಮ್ಮುಕಟ್ಟಿ ಎಳೆದು ಹೊಗೆಬಿಡುತ್ತಾ ಹೊರಗೆ ಕುಳಿತ್ತಿದ್ದ. ಕಳ್ಳಿನ ಕರೆಯನ್ನು ತಳ್ಳಿಹಾಕಲಾಗಲಿಲ್ಲ. ಸತ್ತರೆ ಇವತ್ತೇ ಸಾಯಬೇಕು ಎನ್ನುತ್ತಾ ಹಿತ್ತಲಿಗೆ ಹೋಗಲೆಂದು ಚೊಂಬು ಎತ್ತಿಕೊಂಡು ಹೊರಟ. ಅಂಗಳ ದಾಟಿರಲಿಲ್ಲ. ಮತ್ತೊಮ್ಮೆ ‘ಸೊಂಯ್’ ಎನ್ನುವ ಸದ್ದಾಯಿತು. ಸದ್ದು ಜೋರಾಗಿತ್ತು ಹೇಲು ಬೈರಾಸಿನಲ್ಲಿ ನÀಷ್ಟವಾಗಿತ್ತು. ಬ್ರಹ್ಮಾಂಡ ಸಿಟ್ಟು ಬಂತು. ಯಾರನ್ನೂ ಬೈಯ್ಯುವುದು. ನಿತ್ಯ ಕುಡಿಯುವ ಚಟಕ್ಕೆ ಬೈಯ್ಯುವುದೇ, ತುಕ್ರ ಪೂಜಾರಿಯ ಮೋಸಕ್ಕೆ ಬೈಯುವುದೆ,  ಅಥವಾ ಸಾಲಕ್ಕೆ ಕಂಟ್ರಿ  ಕೊಡದೆ ಈ ಪರಿಸ್ಥಿತಿ ತಂದಿತ್ತ ಧರ್ಣಪ್ಪನಿಗೆ ಬೈಯ್ಯುವುದೆ. ಯಾರನ್ನೂ ಬೈಯಲೂ ಪುರುಸೊತ್ತಿರಲಿಲ್ಲ. ಹೆಂಡತಿಗೆ ಗೊತ್ತಾದರೆ ಆ ದಿನ ಒಂದೆ ಚಾಪೆಯಲ್ಲಿ ಮಲಗುವುದು ಬಿಡಿ ರಾತ್ರಿಯಿಡಿ ತಿಟ್ಟೆಯಲ್ಲೇ ರಾತ್ರಿ ಕಳೆಯಬೇಕು ಎಂದು ಪಕ್ಕದಲ್ಲೇ ಹರಿಯುತ್ತಿದ್ದ ತೋಡಿಗೆ ಬಂದ.  ಲೈಟು ಬದಿಗಿಟ್ಟು ತೋಡಿಗೆ ಇಳಿದ. ‘ಸೊಂಯ್....’ ‘ಸೊಂಯ್....’ ಸದ್ದು ಕೇಳುತ್ತಲೆ ಇತ್ತು, ಹೆದರುತ್ತಲೆ ತೋಡಿನಲ್ಲಿ ಬಟ್ಟೆಯನ್ನು ತೊಳೆಯುತ್ತಿದ್ದ.


    ಮರುದಿನ ಊರಿನಲ್ಲೆಲ್ಲ ಸುದ್ದಿಯೇ ಸುದ್ದಿ. ದೇರಪ್ಪನ ಮನೆಯ ಬೋರು ‘ಪೊಟ್ಟಾಯಿತಂತೆ5.. ಪೊಟ್ಟಾಯಿತಂತೆ..’ ಅರೇ ನಮ್ಮೂರಲ್ಲಿ ನೀರಿಲ್ಲವೆ. ಅದೂ ಆರುನೂರು ಫೀಟು ಆಳಕ್ಕಿಳಿದರೂ ಧೂಳು ಬಿಟ್ಟರೆ ಏನೂ ಇಲ್ಲವಂತೆ.  ಅಯ್ಯೋ ದೇವರೆ ನಮ್ಮ ಊರಿನ ಕಥೆಯೇ ಎಂದರು. ಕೆಲವರು ಅವನ ಬಳಿ ದುಡ್ಡಿನಲ್ಲಿಯೇ ಸುಡುವಷ್ಟು ದುಡ್ಡಿದೆ ಅದಕ್ಕೆ ಕೊರೆಸಿರಬೇಕು, ಅದಲ್ಲದಿದ್ದರೆ ಇನ್ನೊಂದು ಕೊರೆಸುತ್ತಾನೆ ಅಂದರು. ನೀರೆ ಇಲ್ಲದಿದ್ದರೆ ದುಡ್ಡಿದ್ದು ಏನು ಮಾಡುವುದು ಅದನ್ನು ಅನ್ನವೆಂದು ತಿನ್ನುವುದಕ್ಕಾಗುತ್ತದೆಯೇ, ಅಥವಾ ನೀರೆಂದು ಕುಡಿಯಲಾದಿತೇ ಅಂತ ಇನ್ನೊಬ್ಬ ಸೇರಿಸಿದ. ಆ ದಿನ ನಾಲ್ಕು ಜನ ಸೇರಿದಲ್ಲಿ, ಕೊಯ್ಲಿನ ಗದ್ದೆಯಲ್ಲಿ, ಭತ್ತಬಡಿಯುವ ಸದ್ದಿನಲ್ಲಿ, ತುಕ್ರ ಪೂಜಾರಿಯ ಗಡಂಗಿನಲ್ಲಿ, ಗೋಪಾಲಣ್ಣನ ಗೂಡಂಗಡಿಯಲ್ಲಿ ಇದೇ ಮಾತು, ಇದೇ ಚರ್ಚೆ.
    ಕಳೆದೆರಡು ವರ್ಷದಿಂದ ಜಲಪುರಕ್ಕೆ ಬರಗಾಲ ಬಂದಿದೆ. ಮಲೆನಾಡಿನ ಪಕ್ಕದಲ್ಲಿದ್ದರೂ ಈ ಊರು ಕರಾವಳಿಗೆ ಸೇರಿತ್ತು. ಭೌಗೋಳಿಕವಾಗಿ ಮಲೆನಾಡೆ, ಅಷ್ಟು ಹಸಿರಿದೆ. ಹರಿಯುವ ನದಿ, ಝರಿ, ತೋಡು, ತೊರೆಗಳು ಲೆಕ್ಕವಿಲ್ಲದ್ದಷ್ಟಿದೆ. ಆ ಊರಿನ ರಸ್ತೆಯಲ್ಲಿ ಕಿಲೋಮೀಟರ್‍ಗೊಂದರಂತೆ ಮೈಲಿಗಲ್ಲಿನÀ ಬದಲಾಗಿ ಮೋರಿಗಳಿವೆ.  ಆ ನಮೂನಿ ಮಳೆ ಬರುವ ಊರದು.  ಆದರೂ ಎರಡು ವರ್ಷದಲ್ಲಿ ಜಲಪುರ ಬರಗಾಲಕ್ಕೆ ತುತ್ತಾಗಿತ್ತು.  ನೀರೆಂದರೆ ನಿತ್ಯ ಹರಿಯುವ, ಸಂಗ್ರಹಿಸಲಾಗದ, ಉಳಿಸಿಕೊಳ್ಳಲು ಆಗದ ವಸ್ತುವೆಂದೆ ತಿಳಿದಿದ್ದ ಅವರಿಗೆ ಬರಗಾಲದ ನೀರಿನ ಕೊರತೆಯ ಬರೆ ಈಗ ಉರಿಯತೊಡಗಿತ್ತು. ತೋಟದ ಗಿಡಗಳೆಲ್ಲ ಹಳದಿ ಬಣ್ಣಕ್ಕೆ ತಿರುಗಿದ್ದವು. ಹಸಿರು ಮೇವು ಎಲ್ಲೂ ಇಲ್ಲ. ಸುಗ್ಗಿಯ ನೇಜಿ6 ನೆಟ್ಟ ಹಾಗೆ ಒಣಗಿದ್ದವು. ನದಿಯಲ್ಲಿ ಕೈತೋರದಷ್ಟು ನೀರು ಹರಿಯುತ್ತಿತ್ತು. ಸಧ್ಯದಲ್ಲೆ ಅದೂ ಬತ್ತುವ ಹಂತಕ್ಕೆ ಮುಟ್ಟಿತ್ತು. ಎಲ್ಲಾ ಮನೆಯ ಬಾವಿಗಳು ಬಣಗುಟ್ಟುತ್ತಿದ್ದವು. ಬಾವಿ ಕೆÀರೆಯನ್ನೆ ನಂಬಿದ್ದವರು, ಈಗ ಪಂಚಾಯತ್ ನೀರಿಗೆ ಪೈಪು ಹಾಕಿದರು. ಅವರು ಅರ್ಧಗಂಟೆ ಬಿಡುವ ನೀರಿಗೆ ಸದಾ ಕಾಯುತ್ತಿದ್ದರು. ಟ್ಯಾಂಕಿಗಳನ್ನ ತಂದು ಜೋಡಿಸಿದರು. ಅರ್ಧಗಂಟೆ ಬರುತ್ತಿದ್ದ ನೀರು ಕೊನೆ ಕೊನೆಗೆ ಅದೂ ಇಲ್ಲದಾಯಿತು. ಪಂಚಾಯತ್‍ನ ಅಧ್ಯಕ್ಷನಾದ ಕೊರಗಪ್ಪನಿಗೆ ಹೀನಮಾನ ಬೈಯತೋಡಗಿದರು. ಆತನ ದುರಾದೃಷ್ಟಕ್ಕೆ ಆತ ಅಧ್ಯಕ್ಷನಾದ ವರ್ಷದಿಂದಲೆ ಬರಗಾಲ ಬಂದು ಆತನ ನೆಮ್ಮದಿ ಪೂರಾ ಹಾಳಗಿತ್ತು. ಆತ ಮನೆಯ ಹೊರಗೆ ಕಂಡರೆ ‘ಏನು ಕೊರಗಪ್ಪಣ್ಣಾ ನಿನ್ನೆ ಪಂಚಾಯತ್ ನೀರು ಬಿಟ್ಟಿಲ್ವ’ ಎಂದು ಕೇಳುತ್ತಿದ್ದರು. ಇದಕ್ಕೆಲ್ಲ ಉತ್ತರಿಸಿ ಉತ್ತರಿಸಿ ಬಸವಳಿದಿದ್ದ. ಈಗ ಯಾರಿಗೂ ಕಾಣಿಸಿಕೊಳ್ಳದೆ ಮುಟ್ಟಾದ ಹೆಣ್ಣಿನಂತೆ ಮನೆಯ ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದ. ಪಂಚಾಯತ್ ಮೀಟಿಂಗ್‍ನಲ್ಲಿ ಅಭಿವೃದ್ದಿ ಅನುದಾನವನ್ನು ಬೋರ್ ಕೊರೆಸಲು ಬಳಸಿಕೊಳ್ಳುವಂತೆ ಮಾಡಲು ಎಲ್ಲಾರನ್ನೂ ಒಪ್ಪಿಸಿದ್ದ. ಮುಂದಿನ ವಾರ ಬೋರ್ ಕೊರೆಸಲು ಎಲ್ಲಾ ತಯಾರಿಯಾಗಿತ್ತು.


    ಜಲಪುರದ ಕೆಂಪಯ್ಯಜ್ಜನಿಗೆ ಎಂಬತ್ತರ ವಯಸ್ಸು, ಆತ ಊರಿನ ಹಿರಿಯ. ಸದಾ ಮನೆಯ ತಿಟ್ಟೆಯಲ್ಲೇ ಕುಳಿತು ಅಡಿಕೆ ತಿಂದು ಪಕ್ಕದಲ್ಲೆ ಇದ್ದ ಪೀಕದಾನಿಗೆ ಉಗಿದು ಭರ್ತಿಮಾಡುತ್ತಿದ್ದ. ಯಾರಾದರೂ ಮನೆಗೆ ಬಂದÀರೆ ಮಾತಿಗಿಳಿಯುತ್ತಿದ್ದ. ಈ ದಿನ ದೇರಪ್ಪ ಸಪ್ಪೆಮೊರೆ ಮಾಡಿಕೊಂಡು ಗದ್ದೆಯ ಕಡೆಗೆ ಹೋಗುತ್ತಿದ್ದ ಇದನ್ನು ನೋಡಿದ ಅಜ್ಜ ‘ಓ ದೇರಪ್ಪ ಇತ್ತ ಬಾ, ಎಲ್ಲಿಗೆ ಸವಾರಿ, ಇತ್ತ ಬಾ’ ಎಂದು ಕರೆದರು. ಅವನು ನಡೆಯುತ್ತಿದ್ದ ದಾರಿಯನ್ನು ಬದಲಿಸಿ ಕೆಂಪಯ್ಯಜ್ಜನ ಮನೆಯ ದಾರಿ ಹಿಡಿದ. ‘ಅಲ್ಲಾ ಮರಾಯಾ ನಿನ್ನೆ ರಾತ್ರಿ ನಿಮ್ಮ ಮನೆಯ ಮೇಲಿನ ಗುಡ್ಡೆಯಿಂದ ಯಾವ ಪ್ರಾಣಿ ಆ ನಮೂನಿ ಊಸು ಬಿಡುತ್ತಿದ್ದಿದ್ದು’ ಅಂದರು. ಅಜ್ಜನ ಕುಸಾಲಿಗೆ ದೇರಪ್ಪನಿಗೆ ನಗಬೇಕೆ, ಅಳಬೇಕೆ ತಿಳಿಯಲಿಲ್ಲ. ‘ಅಲ್ಲಾ ಅಜ್ಜಾ ನಿಮಗೆ ಸೌಂಡು ಮಾತ್ರ ಕೇಳಿತಾ ಇಲ್ಲಾ ವಾಸನೆಯೂ ಬಂತಾ’ ಅಂದಾ. ‘ಇಲ್ಲ ಇಲ್ಲ ಸದ್ದು ಜೋರಾದಂತೆ ವಾಸನೆ ಕಡಿಮೆಯಲ್ಲವೆ’ ಅನ್ನುತ್ತಾ ಮತ್ತೊಂದು ಮಾತಿನ ಬಾಣ ಎಸೆದರು. ದೇರಪ್ಪನಿಗೆ ತನ್ನ ಮನೆಗೆ ಬೋರು ಕೊರೆಯೊ ಮಿಷಿನು ಬಂದಿದ್ದು ಅಜ್ಜನಿಗೆ ಗೊತ್ತಿಲ್ಲ ಅಂದುಕೊಂಡ. ‘ಅಲ್ಲಾ ಮರಾಯ ಅಂತಹ ಸದ್ದು ನಾನು ಕೇಳಿಯೇ ಇಲ್ಲ, ನಿಮ್ಮ ಮನೆಯ ಕಡೆಯಿಂದಲೆ ಕೇಳುತ್ತಿತ್ತು’ ಎಂದು ಸದ್ದಿನ ಗುಟ್ಟೇನೆಂದು ಅವನ ಬಳಿ ಕೇಳಿದರು. ‘ಅಜ್ಜಾ ನಮ್ಮ ಮನೆಗೆ ಬೋರು ಕೊರೆಯೊ ಮಿಷಿನು ಬಂದಿತ್ತು ಅದರ ಸದ್ದದು. ಆರುನೂರು ಫೀಟು ಕೊರೆದರು ನೀರು ಸಿಗಲಿಲ್ಲ. ಏನು ಮಾಡುವುದು ಹೇಳಿ ನನ್ನ ನಸಿಬೇ ಸರಿ ಇಲ’್ಲ ಎಂದ. ‘ಓ ಇದಾ ಸಂಗತಿ, ನೀರು ಎಲ್ಲಿಂದ ಸಿಗಬೇಕು, ನಮ್ಮೂರಿನಲ್ಲಿ ಒಡ್ಡು ಹಾಕುವ ಕ್ರಮ ತಪ್ಪಿತಲ್ಲ. ಇನ್ನು ನೀರು ನೀರೆ’ ಅಂದರು. ದೇರಪ್ಪನಿಗೆ ಅರ್ಥ ಅಗಲಿಲ್ಲ. ‘ಅಲ್ಲಾ ಯಾವ ಒಡ್ಡು ಅಜ್ಜಾ’ ಅಂದಾ.
        ‘ಅಲ್ಲಾ ನಾವೇನು ಪಂಪಿಲ್ಲದೆ ಬೆಳೆ ಬೆಳೆಯಲಿಲ್ಲವೆ. ನಿಮ್ಮಂತೆ ಎರಡು ಬೆಳೆಯಲ್ಲ... ಏಣೆಲು,7 ಸುಗ್ಗಿ,7 ಕೊಳಕ್ಕೆ7 ಈ ಮೂರು ಬೆಳೆಯನ್ನೂ ಬೆಳೆಯುತ್ತಿದ್ದೆವು. ಆದರೂ ನೀರಿಗೆ ಕೊರತೆಯಿರಲಿಲ್ಲ. ನೀವು ಒಡ್ಡು ಹಾಕುವ ನದಿಗೆ, ನದಿಯ ನೀರಿನ ಮೂಲಕ್ಕೆ ಪಂಪು ಹಾಕಿ ದೇಹದ ರಕ್ತ ಹಿಂಡಿದಂತೆ ಹಿಂಡತೊಡಗಿದಿರಿ. ಅಲ್ಲದೆ ಗದ್ದೆಯನ್ನು ಬಿಟ್ಟು ಕಂಗು ಹಾಕಿದಿರಿ. ತೋಟಾಕ್ಕೆಂದು ಮಕ್ಕಿ ಗುಡ್ಡೆಯನ್ನು ಬೊಳು ಮಾಡಿದಿರಿ ಅಲ್ಲಿಯೂ ಬಿಸಿಲು ಬಿದ್ದು ಗುಡ್ಡೆಯ ತೋಡುಗಳು ಒಣಗಿದವು. ನದಿ ತೋಡಿನ ನೀರನ್ನು ನಿಮ್ಮ ಸ್ಪ್ರಿಂಕ್ಲರ್ ಮೂಲಕ ತೋಟಾಕ್ಕೆ ರಾತ್ರಿಯಿಡಿ ಹರಿಸಿದಿರಿ. ಈಗ ನೀರೆಲ್ಲಿಂದ ಬರಬೇಕು. ನಮ್ಮೂರಿನಲ್ಲಿ ಮಳೆನೀರು ನಿಲ್ಲುವಂತೆ ಎಲ್ಲಾದರೂ ವ್ಯವಸ್ಥೆ ಇದೆಯಾ? ಇದೆಲ್ಲದರ ಪರಿಣಾಮವೆ ಜಲಪುರಕ್ಕೆ ಬಂದ ಬರಗಾಲ ಎಂದ. ದೇರಪ್ಪನಿಗೆ ಅಜ್ಜನ ಮಾತಿನಲ್ಲಿ ಸತ್ಯವಿಲ್ಲ ಎನ್ನುವಷ್ಟು ತ್ರಾಣವಿರಲಿಲ್ಲ. ಸುಳ್ಳು ಎಂದು ಸಾಧಿಸುವುದು ಸಾಧ್ಯವೆ ಇರಲಿಲ್ಲ. 


ದೇರಪ್ಪನಿಗೂ ನೆನಪಿದೆ. ಅಪ್ಪನ ಜೊತೆ ನೆಲ್ಲಿಕಾಯಿಗಾಗಿ ಮಕ್ಕಿ ಗುಡ್ಡಕ್ಕೆ ಹೋಗುತ್ತಿದ್ದುದು. ಅಲ್ಲಿ ಸೂರ್ಯಕಿರಣ ಬೀಳದಷ್ಟು ಒತ್ತೋತ್ತಾಗಿ ಬೆಳೆದ ಮರಗಳನ್ನು ಆಶ್ರಿಯಿಸಿ ಬೆಳೆದಿದ್ದ ಕೊಟ್ಟೆದ ಹಣ್ಣು, ಚೂರಿಕಾಯಿ ಮುಂತಾದ ಹಣ್ಣುಗಳನ್ನು ತಿಂದಿದ್ದು, ಪಲ್ಲಗಳು8 ತುಂಬಿ ನಿದಾನಕ್ಕೆ ಎಲೆಗಳಡಿಯಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ನೀರನ್ನು ಬೊಗಸೆಯಲ್ಲಿ ಕುಡಿದಿದ್ದು ಎಲ್ಲಾವೂ ನೆನಪಿದೆ. ಕಜಕ್ಕೆನದಿಗೆ8 ಒಡ್ಡು ಹಾಕಿ, ಕಣಿಯ ಮೂಲಕ ನೀರು ಹಾಯಿಸಿದ್ದು, ಸರ್ವಕಾಲ ತುಂಬಿ ಹರಿಯುತ್ತಿದ್ದ ನದಿಯಲ್ಲಿ ದನ ಮೇಯಿಸುತ್ತಾ ಈಜಾಡಿದ್ದು. ನೀರಿನಲ್ಲಿ ಚೆಂಡಾಟ ಆಡಿದ್ದು. ಏಣೇಲು ಕೊಯ್ಲಿಗೆ ಮಳೆ ಬಿಡದೆ ಭತ್ತದ ಸೂಡಿ10 ನೀರಿನಲ್ಲಿ ನಾಲ್ಕೈದು ದಿನ ತೇಲಿದ್ದು ಅನಂತರ ಮನಗೆ ಸಾಗಿಸಿ, ಕೊಟ್ಟಿಗೆಯಲ್ಲಿ ರಾಶಿ ಹಾಕಿ ಬಡಿದು ಅಲ್ಪಸ್ವಲ್ಪ ಬಿಸಿನಲ್ಲಿ ಪ್ರಾಯಾಸದಿಂದ ಒಣಗಿಸಿದ್ದು ಇನ್ನೂ ನೆನಪಿಂದ ಮಾಸಿಲ್ಲ.  ಆದರೆ ದೇರಪ್ಪ ಬೆಳೆಯುತ್ತಿದ್ದಂತೆ ಇಡೀ ಜಲಪುರದಲ್ಲಿ ಬದಲಾವಣೆ ಶುರುವಿಟ್ಟುಕೊಂಡಿತು. ಕಚ್ಚಾ ರಸ್ತೆಗೆ ಕಪ್ಪು ಡಾಂಬರು ಹಾಕಿ ಸ್ವಚ್ಛಮಾಡಲಾಯಿತು. ಅದರ ಬೆನ್ನಿಗೆ ಹೋರಾಟ ನಡೆದು ಕೆಂಪು ಬೊರ್ಡಿನ ಬಸ್ಸು ಓಡಾಡಲು ಶುರುವಾಯಿತು. ಜನ ಗೋಪಾಲಣ್ಣನ ಅಂಗಡಿಯ ಉಸಾಬರಿಯನ್ನು ಬಿಟ್ಟು ಪೇಟೆಯ ದಾಸಪ್ಪರ ಅಂಗಡಿಯ ರೀಯಾಯಿತಿಯ ಸಾಮಾನಿಗೆ ಕಟ್ಟುಬಿದ್ದರು. ತಾಲೂಕಿನ ಶಾಸಕರಿಗೆ ಶಾಲು ಹಾಕಿ, ನಾಲ್ಕು ಮುಸುಂಬಿ ಒಂದು ಸೇಬು ಜೊತೆಗೊಂದು ತಟ್ಟೆ, ಕೊರಳಿಗೆ ಕನಕಾಂಬರ ಹಾಕಿ ಹೇಗೊ ವಿದ್ಯುತ್ ಕನೆಕ್ಷನ್ ಮಂಜೂರು ಮಾಡಿಸಿಕೊಂಡರು. ಕಂಬಗಳನ್ನು ಹಾಕಿ ಬೆಳಕಿನ ಬಳ್ಳಿಯನ್ನು ಕಂಬದಿಂದ ಕಂಬಕ್ಕೆ ಹೊಸೆದು ಮನೆ ಬೆಳಗಿದರು. ಒಂದೊಂದೆ ಬದಲಾವಣೆಗಳು ಸಹಜವೆಂಬಂತೆ ನಡೆದವು. ಜಲಪುರದಲ್ಲಿ ಕ್ರಾಂತಿಯಂತೆ ಎಲ್ಲಾ ಸೌಲಭ್ಯಗಳು ದೊರೆತವು. ಕಾಡಿನ ಯಾವ ಮೂಲೆಯಲ್ಲೂ ನೆಟ್‍ವರ್ಕ್ ಸಿಗುವಂತೆ ಎತ್ತರದ ಜಾಗದಲ್ಲಿ ಟವರ್ ನಿಲ್ಲಿಸಿದ್ದರು. ಊರಿನ ಹುಡುಗರು ಉಜ್ಜುವುದರಲ್ಲಿ ನಿಸ್ಸಿಮರಾದರು. ಹೀಗೆ ಜಲಪುರದ ಭವಿಷ್ಯ ಉಜ್ವಲವಾಗುತ್ತಿದೆ ಅಂದರೂ ಎಲ್ಲೊ ತನ್ನ ಅಸ್ಥಿತ್ವವನ್ನು ಕಳದುಕೊಳ್ಳುತ್ತಿತ್ತು.
    ಮೈಲು ಮೈಲು ದೂರದ ಬೈಲು ಕಡಿಮೆಯಾಗಿ ಅಲ್ಲಲ್ಲಿ ಅಡಿಕೆಯ ತೋಟ, ಬಾಳೆಯ ತೋಟ, ಶುಂಠಿ ಎನ್ನುವ ಹೆಸರಿನಲ್ಲಿ ವಾಣಿಜ್ಯ ಬೆಳೆ ಬೆಳೆದರು. ಮಂಗಳೂರು ಸುಪಾರಿಯ ಕರಿಂ ಬ್ಯಾರಿ ತಿಂಗಳಿಗೊಮ್ಮೆ ಬಂದು ಊರಿನ ಜನರ ಸಣ್ಣ ಮಿಂಟಿಗ್ ಮಾಡಿ ಮಾರ್ಕೆಟ್ ಪಾಠ ಮಾಡುತ್ತಿದ್ದ. ಶುಂಠಿಗೆ ರೇಟು ಜಾಸ್ತಿಯೆಂದು, ಬಾಳೆಕಾಯಿ ಧರ್ಮಕ್ಕೆ ಕೊಟ್ಟರೂ ಬೇಡವೆಂದೂ ಹೇಳುತ್ತಿದ್ದ. ಅಡಿಕೆ ಒಯ್ಯಲು ಬಂದರಿಗೆ ಹಡಗು ಬಂದಿದೆ ಒಂದು ವಾರದಲ್ಲಿ ಲೋಡು ಆಗುತ್ತದೆ ಅದು ಹೋದರೆ ಮತ್ತೆ ರೇಟು ಏರುವುದಿಲ್ಲ ಎನ್ನುತ್ತಾ ಆಪತ್ತಿನ ಖರ್ಚಿಗೆ ಇರಲೆಂದು ಇರಿಸಿಕೊಂಡಿದ್ದವರ ಅಡಿಕೆಯನ್ನೂ ಸಾಗಿಸುತ್ತಿದ್ದ. ಒಂದು ಕಾಲದಲ್ಲಿ ತಾಲೂಕಿಗೆ ಸಂಪರ್ಕವಿಲ್ಲದ ಜಲಪುರ ಜಗತ್ತಿಗೆ ಪರಿಚಯವಾಯ್ತು. ಬಾಬು ಶೆಟ್ಟರ ಮಗ ಆಸ್ಟ್ರೇಲಿಯಾಕ್ಕೆ ಹೋಗಿದ್ದವ ಮೊನ್ನೆ ದೊಡ್ಡ ಬ್ಯಾಗು ಹೊತ್ತುಕೊಂಡು ಊರಿಗೆ ಬಂದಿದ್ದ. ಈಗ ಶೆಟ್ಟರು ಯಕ್ಷಗಾನ ಶೈಲಿಯಲ್ಲೇ ಮಾತಾಡುತ್ತಿದ್ದರು. ಊರಿನವರಿಗೆ ಇದೆ ವಿನೋದವಾದ್ದರಿಂದ ಅವರೂ ದನಿಗೂಡಿಸುತ್ತಿದ್ದರು. ಮಾತಿನ ಭರದಲ್ಲಿ ಮೀಸೆಗೆ ಸಿಡಿದ ಎಲೆಅಡಿಕೆಯ ರಸಪಾಕವನ್ನು ಬೈರಾಸಿನಿಂದ ಒರೆಸಿ ಒಳಿದಿದ್ದನ್ನ ಉಗುಳಿ ಮಾತಿಗಿಳಿಯುತ್ತಿದ್ದರು. ಇಂತಹ ಜಲಪುರಕ್ಕೀಗ ಬರಗಾಲ. ಈಗ ಜನ ಎಲ್ಲಾ ಬಿಟ್ಟು ನೀರು ಮತ್ತು ಬೋರಿನ ಚರ್ಚೆಯನ್ನು ಮಾಡುತ್ತಾ ಕುಳಿತಿದ್ದರು.


    ‘ಅಲ್ಲಾ ದೇರಪ್ಪ ಆರುನೂರು ಫೀಟು ಹೋದರು ಯಾರು ಜನ ಸಿಗಲಿಲ್ಲವಾ’ ಅಂದರು. ದೇರಪ್ಪ ಕಕ್ಕಾಬಿಕ್ಕಿಯಾಗಿ ‘ಅಷ್ಟು ಆಳದಲ್ಲಿ ಹೇಣವಾದರು ಸಿಕ್ಕೀತು ಜನ ಎಲ್ಲಿಂದ ಅಂದ’. ‘ಅಲ್ಲಾ ದೇರಪ್ಪ ಅತಳ, ವಿತಳ, ಸುತಳ, ತಲಾತಳಾ, ಪಾತಳಕ್ಕೆ ಕನ್ನ ಹಾಕಿದರೂ ನಿನಗೆ ಜನ ಸಿಗಲಿಲ್ಲ ಅಂದರೆ ನೀರೆಲ್ಲಿಂದ ಸಿಗಬೇಕು’ ಅಂದರು. ಅಯ್ಯೋ ಕೆಂಪಯ್ಯಜ್ಜನ ಊಹೆಯೇ ಎಂದು ದೇರಪ್ಪ ಉದ್ಗಾರ ತೆಗೆದ. ‘ಅಲ್ಲಾ ಇಲ್ಲಿ ಮಾತ್ರ ಬರಗಾಲ ಅಲ್ಲ ದೇರಪ್ಪ ಅಲ್ಲಿಯೂ ಬರಗಾಲವಿರಬೇಕು ಅದಕ್ಕೆ ನಿನಗೆ ನೀರು ಸಿಗಲಿಲ್ಲ. ನೀನು ಮಂಡೆಬಿಸಿ ಮಾಡಬೇಡ, ಈ ಬಾರಿ ನಿನ್ನ ಜಮೀನಿನಲ್ಲಿ ತೋಡಿಗೆ ಒಡ್ಡುಗಳನ್ನು ಹಾಕು. ಆ ಗೇರು ಬೀಜದ ತೋಟದಲ್ಲಿ ಇಂಗು ಗುಂಡಿ ಮಾಡು ಸುಮ್ಮನೆ ಭೂಮಿಗೆ ಕೊಳವೆ ಇಳಿಸಿ ಕೋಲೆ ಬಸವನಾಗಬೇಡ. ಅಂತರ್ಜಲ ಬಸಿದು ಖಾಲಿ ಮಾಡಿ ಎಲ್ಲಿಗೆ ಹೋಗುತ್ತೀರಿ’ ಎಂದ. ದೇರಪ್ಪನಿಗೆ ಏನೂ ತಿಳಿಯಲಿಲ್ಲ. ನಾಸದ ಚಂದ್ರಯಾನ, ಮಂಗಳಯಾನದ ಬಗ್ಗೆ ಗೊತ್ತಿದ್ದರೆ ಅದಕ್ಕೆ ಅರ್ಜಿಹಾಕುವ ಪ್ರಸ್ತಾಪ ತೆಗೆಯುತ್ತಿದ್ದನೊ ಏನೊ. ಮಾತು ಬಿಟ್ಟು ಮೌನಕ್ಕೆ ಶರಣಾದ.
    ಕೆಂಪಯ್ಯಜ್ಜ ಮುದಿಯನಾದರೂ ದೇರಪ್ಪನಿಗೆ ಆತ ಹೇಳಿದ್ದು ಸತ್ಯವೆನಿಸಿತು. ಮೊನ್ನೆ ಕೃಷಿ ಇಲಾಖೆಯ ಅನುದಾನದಲ್ಲಿ ಜೋಡಿಸಿದ ಪಂಪು ಗಾಳಿಯುಗುಳುತ್ತಿತ್ತೇ ವಿನಾಃ ನೀರು ಬರುತ್ತಿರಲಿಲ್ಲ. ಬೋರಿನ ಮೆಷಿನ್ನು ಕಲ್ಲನ್ನು ಧೂಳು ಮಾಡಿ ಲಕ್ಷರೂಪಾಯಿಯನ್ನ ಪುಡಿಗಟ್ಟಿ ಹೋಯಿತೇ ಹೊರತು ಒಂದು ತೊಟ್ಟು ನೀರು ಕೂಡ ಒಸರಲಿಲ್ಲ11. ಆತ ಕಾಲನಿಗೆ ಬಯ್ಯಬೇಕೆಂದುಕೊಂಡ. ಬೇಡ, ಪರ್ಜನ್ಯ ಹೋಮ ಮಾಡುವ ಎಂದುಕೊಂಡ ಅದೂ ಬೇಡ. ಅಲ್ಲಿ ಬೋರಿನವ ತಿಂದರೆ ಇಲ್ಲಿ ಭಟ್ರು ತಿಂದು ಸ್ವಾಹ ಮಾಡುತ್ತಾರೆ. ಮತ್ತೆ ಯಾರಿಗೆ ಮೊರೆ ಹೋಗಲಿ, ನೀರು ಬೇಕಲ್ಲ. ನೀರಿನ ಹಸಿವು ವಿಪರೀತವಾಗತೋಡಗಿತು. ಆತನಿಗೆ ತೋಟದ ಗಿಡಗಳು ಹಸಿರಿನಿಂದ ಕಂಗೊಳಿಸಿದರೆ ಆನಂದ. ನಿತ್ಯ ಸ್ಪ್ರಿಂಕ್ಲರ್ ನೀರನ್ನು ಚೆಲ್ಲುತ್ತಾ ಸುತ್ತ ತಿರುಗಿದರೆ ಉಲ್ಲಾಸ. ಅದಾವುದೂ ಇಲ್ಲದೆ ಆತನಿಗೀಗ ನೆಮ್ಮದಿ ಇಲ್ಲ. ತುಕ್ರ ಪೂಜಾರಿಯ ಗಡಂಗಿನಲ್ಲಿ ಕಳ್ಳಾದರೂ ಸಿಗಬಹುದು ನೀರು ಸಿಗಲಾರದು ಎನ್ನುವಂತಾಗಿತ್ತು ಜಲಪುರದ ಸ್ಥಿತಿ.


    ದೇರಪ್ಪ ಕೆಂಪಯ್ಯಜ್ಜನ ಜಗುಲಿಯಿಂದ ಎದ್ದು ಬೈರಾಸು ಕೊಡವಿದ. ಪಂಚೆಯನ್ನೂ ಕೊಡವಿ ಎತ್ತಿಕಟ್ಟಿ ‘ಅಜ್ಜಾ ನಾನು ತೋಟಕ್ಕೆ ಹೋಗುತ್ತೇನೆ, ಈ ಮಳೆಗಾಲಕ್ಕೆ ಒಡ್ಡು ಹಾಕುವ ಏನಂತಿರಿ’ ಅಂದಾ ‘ಒಡ್ಡು ಹಾಕದಿದ್ದರೆ ನೀವು ಅಡ್ಡಬೀಳುವುದಕ್ಕೇನು ತೊಂದರೆ ಇಲ್ಲ’ ಎಂದರು.
ದೇರಪ್ಪನಿಗೆ ಕಾರ್ಗಲದ ವೈಭವದ ನೆನಪುಗಳು ಮರುಕಳಿಸಿದವು. ಕಣ್ಣುಮುಂದೆ ಕ್ಯುಸೆಕ್‍ಗಟ್ಟಲೆ ನೀರು ಹರಿದರೂ ಕುರುಡರಾಗಿ ನಡೆದೆವಲ್ಲಾ ಎಂದುಕೊಂಡ. ಬರಗಾಲದ ಬರೆಯಿಂದ ನೀರಿನ ಹಸಿವು ತಾರಕಕ್ಕೇರತೊಡಗಿದ್ದರಿಂದ ನೀರು ನಾಲಿಗೆಯಲ್ಲಿ ಕುಣಿಯತೊಡಗಿತ್ತು.  ಮಾಡಿದ ತಪ್ಪಿನ ಅರಿವಾಯ್ತು. ಮನುಷ್ಯನಿಗೆ ಎಲ್ಲವೂ ಅನುಭವದಿಂದ ಕಲಿಯಲು ಸಾಧ್ಯವಿಲ್ಲ. ಕೆಲವನ್ನು ನೋಡಿ, ಕೇಳಿ ತಿಳಿದುಕೊಳ್ಳಬೇಕಂತೆ. ಕೆಂಪಯ್ಯಜ್ಜನ ಯೋಜನೆ ಹಳೆಯದಾದರೂ ಆಧುನಿಕ ಕಾಲದಲ್ಲೂ ಜಲಕ್ರಾಂತಿ ಮಾಡಬಲ್ಲ ತಾಕತ್ತಿವನು ಎಂದು ದೇರಪ್ಪನಿಗೆ ಅರಿವಾಯಿತು.
    ದೇರಪ್ಪ ಕೆಂಪಯ್ಯಜ್ಜನ ಅಂಗಳದಿಂದ ಮುಖ್ಯದಾರಿಗೆ ಅಗಚುವ ದಾರಿ ಹಿಡಿದು ತೋಟದ ಕಡೆಯ ದಾರಿಗೆ ದೃಷ್ಟಿ ಹಾಯಿಸಿದ. ತೋಟಕ್ಕೆ ಹೋಗುವ ಮನಸ್ಸಿಲ್ಲದೆ ಮನೆಯ ಕಡೆಗೆ ಹೆಜ್ಜೆ ಹಾಕಿದ.
    ಟೋಕ್ಕಯ್ಯನ ಹೆಂಡತಿ ಸಂಜೆ ತೋಡಿಗೆ ಬಟ್ಟೆ ಒಗೆಯಲು ಹೋಗಿದ್ದಳು. ನಿನ್ನೆ ರಾತ್ರಿ ದೇರಪ್ಪ ಗೌಡರ ಮನೆಯಲ್ಲಿ ಬೋರು ಕೊರೆಸಿದರಂತೆ ಆರುನೂರು ಅಡಿ ಕೊರೆದರೂ ನೀರು ಸಿಗಲಿಲ್ಲವಂತೆ ಎಂದು ಸುಶೀಲ ಹೇಳಿದ ವರದಿಯನ್ನು ಟೋಕ್ಕಯ್ಯನಿಗೆ ಒಪ್ಪಿಸಿದಳು. ಅಲ್ಲಾ ನಿನ್ನೆ ಯಾರೊ ಅರೆ ಹುಚ್ಚರು ಕಂಠಪೂರ್ತಿ ಕುಡಿದು ತೋಡಿನಲ್ಲಿ ಹೇತು ರಾಡಿಯೆಬ್ಬಿಸಿದ್ದಾರೆ. ಕುಡಿದರೆ ಬಟ್ಟೆ ಒಗೆಯುವ ಗುಂಡಿಯೆನ್ನುವ ಪ್ರಜ್ಞೆಯೂ ಇಲ್ಲ ಎಂದು ಕ್ಯಾಕರಿಸಿ ಉಗಿದಳು. ಟೋಕ್ಕಯ್ಯ ಹೆಗಲಿನ ಬೈರಾಸಿನಿಂದ ಮುಖ ಒರೆಸಿಕೊಂಡು ಹಿತ್ತಲ ಕಡೆ ನೋಡಿದ.


ಶಬ್ದಾರ್ಥ
1.    ಬೈರಾಸು: ಟವೆಲ್, ಅಂಗವಸ್ತ್ರ2.    ಗಡಂಗು: ಕಳ್ಳು, ಸಾರಾಯಿ ಮಾರುವ ಜಾಗ
3.    ಜುಲಾಬು: ಬೇಧಿ
4.    ಕಂಟ್ರಿ: ಕಳ್ಳಭಟ್ಟಿ ಸಾರಾಯಿ
5.    ಪೊಟ್ಟು:  ನೀರು ಸಿಗಲಿಲ್ಲ, ನೀರೇ ಇಲ್ಲ
6.    ನೇಜಿ: ಭತ್ತದ ಸಸಿ
7.    ಏಣೆಲು, ಸುಗ್ಗಿ,ಕೊಳಕ್ಕೆ: ಬೇಸಾಯ ಮಾಡುವ ಆವರ್ತನಗಳು, ಮುಂಗಾರು ಹಿಂಗಾರು ಬೆಳೆ ಎನ್ನುವ ಹಾಗೆ ಕರಾವಳಿ ಬಾಗದ ತುಳು ಪರಿಭಾಷೆ
8.    ಪಲ್ಲ: ಕಾಡಿನಲ್ಲಿ ನೀರು ನಿಂತ ಸಣ್ಣ ಜಾಗ
9.    ಕಜಕ್ಕೆನದಿ: ನದಿಯ ಹೆಸರು
10.    ಸೂಡಿ: ಕೊಯ್ಲು ಮಾಡಿದ ಭತ್ತದ ಕಟ್ಟು. ಬೈಹುಲ್ಲಿನ ಕಟ್ಟಿಗೂ ಬಳಸುತ್ತಾರೆ
11.    ಒಸರು: ನೀರಿನ ಚಿಲುಮೆ


ಫೋಟೊ ಕೃಪೆ; ಗೂಗಲ್




ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಹುಮುಖಿ ಪ್ರತಿಭೆ ಕೆ.ಪಿ ತೇಜಸ್ವಿಯವರ ಬದುಕು ಬರಹ

ಕರಾವಳಿ ಬದುಕಿನ ಹಿನ್ನೆಲೆಯಲ್ಲಿ ‘ಗಾಂಧಿ ಬಂದ’ ಕಾದಂಬರಿಯ ಮಹತ್ವ

ಸಮತೆಯ ಕಟ್ಟು