ಬಿದಿರಕ್ಕಿ

ಸೇಸಪ್ಪ ಗೌಡರ ಮನೆಯಂಗಳದಲ್ಲಿ ಬೆಳಗ್ಗೆಯೇ ಜನ ಸೇರಿದ್ದರು. ಅವರೆಲ್ಲ ನೆಟಿಗೆ ತೆಗೆಯುತ್ತಿದ್ದ ತಮ್ಮೂರಿನ ಮನೆಯ ಮಾಡುಗಳ ಬಗ್ಗೆ ಮಾತನಾಡುತ್ತಿದ್ದರು. ಸೇಸಪ್ಪ ಗೌಡರು ಹೇಗೊ ಅಲ್ಪಸ್ವಲ್ಪ ದುಡ್ಡು ಉಳಿಸಿ ಪಕ್ಕಾಸು ಮಾಡುವ ಯೋಚನೆ ಮಾಡಿದ್ದರು. ಆದಂ ಬ್ಯಾರಿಗೆ ಅಡ್ವಾನ್ಸೂ ಕೊಟ್ಟಿದ್ದರು. ಅದು ನಿನ್ನೆ ದಿನ ಸಂಜೆ ಊರಿಡಿ ಸುದ್ದಿಯಾಗಿತ್ತು. ಜನ ಊರಿನ ಗಡಂಗಿನಲ್ಲಿ ಕಳ್ಳು ಕುಡಿಯುತ್ತಾ ಮೀಸೆಗಂಟಿದ ನೊರೆಯನ್ನು ಬೈರಾಸಿನಿಂದ ಒರೆಸಿಕೊಳ್ಳುತ್ತಾ ಮಾತಿಗಿಳಿಯುತ್ತಿದ್ದರು. ಈ ಬಾರಿಯ ಮಳೆಗಾಲವನ್ನು ನೆನೆಸಿಕೊಂಡಾಗಲೆ ತಲೆಗೇರಿದ ನಶೆ ಜರ್ರನೆ ಇಳಿಯುತ್ತಿತ್ತು. ಸೇಸಪ್ಪ ಗೌಡರು ಪಕ್ಕಾಸಿಗೆ ಅಡ್ವಾನ್ಸ್ ಕೊಟ್ಟಿದ್ದು ತಮ್ಮ ಮನೆಯ ಮಾಡಿನ ಆಯುಷ್ಯವೂ ಮುಗಿದಿದೆ ಎನ್ನುವ ಸೂಚನೆಯಿದು ಎನ್ನವುದು ಅವರಿಗೆ ಅರಿವಾಗಿತ್ತು. ಆರುವರ್ಷದ ಹಿಂದಿನ ಮಾತುಗಳಿವು. ವರ್ತನಾಪುರದ ಎದುರಿನ ಗುಡ್ಡೆಯ ನೆತ್ತಿಯಿಂದ ಪಾದಮೂಲದವರೆಗೂ ಎಲ್ಲೆಡೆಯೂ ಹಿಂಡು ಹಿಂಡು ಬಿದಿರು. ಎಲ್ಲಿ ನೋಡಿದರೂ ಬಿದಿರೇ ಬಿದಿರು. ಬಸಳೆ ದೊಂಪಕ್ಕೆ, ಅಲಸಂಡೆ ಲಾಟೆಗೆ, ಬೇಲಿಗೆ, ಕೈಸಂಕ, ತೋಡಿನ ಸಂಕ, ಮನೆ ಮಾಡು, ಅದಿರಲಿ ಬಚ್ಚಲ ಹಂಡೆಯ ನೀರು ಕಾಯಿಸಲು, ಭತ್ತ ಬೇಯಿಸಲು ಎಲ್ಲೆಡೆ ಬಿದಿರಿನದ್ದೆ ಕಾರುಬ...