ಬಿದಿರಕ್ಕಿ
ಸೇಸಪ್ಪ ಗೌಡರ ಮನೆಯಂಗಳದಲ್ಲಿ ಬೆಳಗ್ಗೆಯೇ ಜನ ಸೇರಿದ್ದರು. ಅವರೆಲ್ಲ ನೆಟಿಗೆ ತೆಗೆಯುತ್ತಿದ್ದ ತಮ್ಮೂರಿನ ಮನೆಯ ಮಾಡುಗಳ ಬಗ್ಗೆ ಮಾತನಾಡುತ್ತಿದ್ದರು. ಸೇಸಪ್ಪ ಗೌಡರು ಹೇಗೊ ಅಲ್ಪಸ್ವಲ್ಪ ದುಡ್ಡು ಉಳಿಸಿ ಪಕ್ಕಾಸು ಮಾಡುವ ಯೋಚನೆ ಮಾಡಿದ್ದರು. ಆದಂ ಬ್ಯಾರಿಗೆ ಅಡ್ವಾನ್ಸೂ ಕೊಟ್ಟಿದ್ದರು. ಅದು ನಿನ್ನೆ ದಿನ ಸಂಜೆ ಊರಿಡಿ ಸುದ್ದಿಯಾಗಿತ್ತು. ಜನ ಊರಿನ ಗಡಂಗಿನಲ್ಲಿ ಕಳ್ಳು ಕುಡಿಯುತ್ತಾ ಮೀಸೆಗಂಟಿದ ನೊರೆಯನ್ನು ಬೈರಾಸಿನಿಂದ ಒರೆಸಿಕೊಳ್ಳುತ್ತಾ ಮಾತಿಗಿಳಿಯುತ್ತಿದ್ದರು. ಈ ಬಾರಿಯ ಮಳೆಗಾಲವನ್ನು ನೆನೆಸಿಕೊಂಡಾಗಲೆ ತಲೆಗೇರಿದ ನಶೆ ಜರ್ರನೆ ಇಳಿಯುತ್ತಿತ್ತು. ಸೇಸಪ್ಪ ಗೌಡರು ಪಕ್ಕಾಸಿಗೆ ಅಡ್ವಾನ್ಸ್ ಕೊಟ್ಟಿದ್ದು ತಮ್ಮ ಮನೆಯ ಮಾಡಿನ ಆಯುಷ್ಯವೂ ಮುಗಿದಿದೆ ಎನ್ನುವ ಸೂಚನೆಯಿದು ಎನ್ನವುದು ಅವರಿಗೆ ಅರಿವಾಗಿತ್ತು.
ಆರುವರ್ಷದ ಹಿಂದಿನ ಮಾತುಗಳಿವು. ವರ್ತನಾಪುರದ ಎದುರಿನ ಗುಡ್ಡೆಯ ನೆತ್ತಿಯಿಂದ ಪಾದಮೂಲದವರೆಗೂ ಎಲ್ಲೆಡೆಯೂ ಹಿಂಡು ಹಿಂಡು ಬಿದಿರು. ಎಲ್ಲಿ ನೋಡಿದರೂ ಬಿದಿರೇ ಬಿದಿರು. ಬಸಳೆ ದೊಂಪಕ್ಕೆ, ಅಲಸಂಡೆ ಲಾಟೆಗೆ, ಬೇಲಿಗೆ, ಕೈಸಂಕ, ತೋಡಿನ ಸಂಕ, ಮನೆ ಮಾಡು, ಅದಿರಲಿ ಬಚ್ಚಲ ಹಂಡೆಯ ನೀರು ಕಾಯಿಸಲು, ಭತ್ತ ಬೇಯಿಸಲು ಎಲ್ಲೆಡೆ ಬಿದಿರಿನದ್ದೆ ಕಾರುಬಾರು. ಬಿದಿರು ವರ್ತನಾಪುರದ ಬೇಲಿ, ದೊಂಪಗಳಲ್ಲಿ ಮಾತ್ರ ಕಂಗೋಳಿಸಿದ್ದಲ್ಲ. ಅವರ ಆಹಾರದಲ್ಲೂ ಅದು ಸೇರಿಕೊಂಡಿತ್ತು. ಕಣಿಲೆಯ ಜೊತೆ ಹಲಸಿನ ಬೀಜ ಸೇರಿಸಿ ಮಾಡಿದ ಸಾಂಬರನ್ನು ಮೆಚ್ಚದವರಿರಲಿಲ್ಲ. ಸೋಮವಾರದ ಸಂತೆಯಲ್ಲಿ ವರ್ತನಾಪುರದ ಕಣಿಲೆಯ ಕ್ರಯ ಕೊಂಚ ತುಟ್ಟಿಯೆ. ಎಳೆ ಬಿದಿರು ಕಣಿಲೆಯ ಉಪ್ಪಿನಕಾಯಿಯಂತೂ ವರ್ತನಾಪುರಕ್ಕೆ ಹೆಸರು ತಂದಿತ್ತು. ವರ್ತನಾಪುರದಲ್ಲಿ ಬಿದಿರು ಜನರ ಬದುಕಿನೊಂದಿಗೆ ಬೆಸೆದುಕೊಂಡು ತೊಟ್ಟಿಲಿನಿಂದ ಚಟ್ಟದವರೆಗೂ ಅವರ ಸಂಗಾತಿಯಾಗಿತ್ತು.
ವರ್ತನಾಪುರದ ಜನ ನೋಡಿ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದೆ ಬಂತು. ಒಂದೇ ತಿಂಗಳಿನಲ್ಲಿ ಇಡೀ ಕಾಡಿಗೆ ಕಾಡೇ ಬೆಳ್ಳಗಾಗಲಾರಂಭಿಸಿತು. ಗಾಳಿಗೆ ಲಟಲಟನೆ ನೆಟಿಗೆ ತೆಗೆಯುತ್ತಿದ್ದ ರಾಕ್ಷಸ ಗಾತ್ರದ ಬಿದಿರ ಮೇಳೆಗಳು ಹೂ ಬಿಡಲು ಆರಂಭಿಸಿದವು. ಎಲ್ಲರ ಬಾಯಲ್ಲೂ ವರ್ತನಾಪುರದ ಕಾಡಿನಲ್ಲಿ ರಾಜನ್ ಆದ ಸುದ್ದಿಯೇ. ಪಕ್ಕದೂರಿನವರು ಈ ಬಾರಿ ವರ್ತನಾಪುರದಿಂದ ಸ್ವಲ್ಪ ಬಿದಿರಕ್ಕಿ ತರಬೇಕು ಆರವತ್ತು ವರ್ಷಕ್ಕೊಮ್ಮೆ ಬಿದಿರಕ್ಕಿಯಾಗೊದಂತೆ ಎನ್ನುತ್ತಿದ್ದರು. ಎದುರಿಗೆ ವರ್ತನಾಪುರದವರು ಸಿಕ್ಕಿದರೆಂದರೆ
ಹೌದಾ ಇವರೆ ನಮಗೊಂದಿಷ್ಟು ರಾಜನ್ ಅಕ್ಕಿ ಸಿಗಬಹುದಾ? ಕ್ರಯ ಎಷ್ಟಾದರಾಗಲಿ ಒಂದು ಸೇರು ಕೊಡಿ ಮಾರ್ರೆ ಒಂದು ಉಪಕಾರ ನಿಮ್ಮಿಂದ, ಎನ್ನುವ ಮಾತು ಸಾಮಾನ್ಯವಾಗಿತ್ತು.
ಬಿದಿರು ಹೂ ಬಿಟ್ಟಿದ್ದೆ ತಡ ಕರಿಯ ಆಚಾರಿಗೆ ತಳಮಳ ಶುರುವಾಯಿತು. ಇಡೀ ಊರಿನ ಮಾಡಿನ ಉಸಾಬರಿ ನೋಡಿಕೊಳ್ಳುತ್ತಿದ್ದವ ಆತನೆ. ಈಗ ಕೆಲಸವಿಲ್ಲದೆ ಸಂಸಾರ ಹೇಗೆ ಸಾಗಿಸಲಿ ಅನ್ನುವ ಭೀತಿ. ವರ್ತನಾಪುರದಲ್ಲಿ ಎಲ್ಲರ ಮನೆಯ ಮಾಡು ಬಿದಿರಿನದ್ದೆ. ಅದರ ಚಾಕರಿ ಮಾಡುವಾತ ಕರಿಯ ಆಚಾರಿ ಮತ್ತು ಆತನ ಸಂಗಡಿಗರು. ಬಿದಿರು ಹೂ ಬಿಟ್ಟಿತೆಂದರೆ ಈತನ ಅನ್ನಕ್ಕೆ ಕಲ್ಲು ಬಿತ್ತೆಂದೆ ಅರ್ಥ. ಹೂ ಬಿಟ್ಟ ಬಿದಿರ ಮೇಳೆ ವರ್ಷಕಳೆಯುವುದರೊಳಗೆ ಕಸುವುಕಳೆದುಕೊಂಡು ಬಿದ್ದು ಹೋಗುತ್ತದೆ.+ ಹೊಸ ಬಿದಿರು ಬೆಳೆದು ಬಳಕೆಗೆ ಬರಬೇಕಾದರೆ ಏಳೆಂಟು ವರ್ಷಗಳೇ ಬೇಕು. ಅಲ್ಲಿಯ ವರೆಗೆ ಊರಿನ ಜನ ತಮ್ಮ ಮಾಡಿನ ಉಸಾಬರಿಗೆ ಹೋಗೊದು ಕಡಿಮೆ. ಇನ್ನೂ ಬಿಚ್ಚಲೇಬೇಕಾದರೆ ಪಕ್ಕಾಸಿನ ಮೊರೆ ಹೋಗುತ್ತಾರೆ. ಒಮ್ಮೆ ಪಕ್ಕಾಸು ಹಾಕಿದರೆಂದರೆ ಇಪ್ಪತ್ತು ವರ್ಷ ಆ ಕಡೆ ಸುಳಿಯುವಂತಿಲ್ಲ. ಇದೆಲ್ಲ ಯೋಚನೆ ಮಾಡುತ್ತಲೆ ಕರಿಯ ಆಚಾರಿ ಕುಂಞಬ್ಯಾರಿಯ ಮನೆ ಕಡೆ ಹೊರಟ. ಅವರಿಬ್ಬರಿಗೂ ಸಲುಗೆಯಿದೆ. ರಾತ್ರಿ ಶಾಲೆಯಲ್ಲಿ ಓದಲು ಬಂದಾಗ ಕುದುರಿದ ಸ್ನೇಹ ಇಂದಿಗೂ ಅದೇ ಕುಶಾಲು ಅದೇ ಸಲುಗೆ.
ಕರಿಯ ಆಚಾರಿ ಕುಂಞ ಬ್ಯಾರಿಯ ಅಂಗಳಕ್ಕೆ ಕಾಲಿಡುತ್ತಲೆ. ಕುಂಞ ಬ್ಯಾರಿ ಸೋಮವಾರದ ಸಂತೆಗೆ ಹೊರಡುವ ತರಾತುರಿಯಲ್ಲಿದ್ದ.
‘ಕುಂಞಕ್ಕಾ ಎಲ್ಲಿಗೆ ಸವಾರಿ ಸಂತೆಗಾ? ಏನು ಕಣಿಲೆ ಇಲ್ಲವಾ ಈ ಸರ್ತಿ’ ಅಂದಾ
‘ಓ ಕರಿಯ ಬಾ ಮಾರಾಯ. ಕಣಿಲೆಯನ್ನು ಇನ್ನು ಸಂತೆಯಿಂದ ಇಲ್ಲಿಗೆ ನಾನೇ ತರಬೇಕು. ಇಡೀ ಗುಡ್ಡೆಯೇ ರಾಜನ್ ಆಗಿ ನಮ್ಮ ಅನ್ನವನ್ನೆ ಅಲ್ಲಾಹ್ ಕಸಿದುಕೊಂಡನಲ್ಲಪ್ಪ’
‘ಹ್ಞಾ ಹೌದು, ನಾನು ಅದೇ ವಿಚಾರ ಮಾತಾಡುವ ಅಂತಾ ಬಂದೆ. ಸಂತೆಯಲ್ಲಿ ನಿಮಗೆ ಬೇರೆ ಊರಿನ ದೋಸ್ತಿಗಳು ಇದ್ದಾರಲ್ವೆ. ನಮಗೆ ಎಲ್ಲಾದರೊಂದು ಮನೆ ಮತ್ತು ಮಾಡಿನ ಕೆಲಸವಿರುವ ಊರಿದ್ದರೆ ಹುಡುಕಿ ಕೊಡು ಮಾರಾಯ. ಇನ್ನು ವರ್ತನಾಪುರದಲ್ಲಿ ಅನ್ನ ನೀರಿಗೆ ಐದಾರು ವರ್ಷ ಕಷ್ಟವೇ.’ ಅನ್ನುತ್ತಲೆ ತೊಟ್ಟು ಕಣ್ಣೀರು ಕರಿಯ ಆಚಾರಿಯ ಕೆನ್ನೆ ಸವರಿತು. ಕರಿಯ ಆಚಾರಿ ನೆನ್ನೆ ದಿನಾನೆ ಊರು ಬಿಡುವ ಯೋಚನೆ ಮಾಡಿದ್ದ. ಮನೆಯ ಮುಂದಿನ ಇಡೀ ಗುಡ್ಡೆ ಬೆಳ್ಳಗಾಗಲಾರಂಭಿಸಿದ್ದೆ ತಡ ಅವನ ಉದ್ಯೋಗಕ್ಕೆ ಸಂಚಕಾರ ಬಂದಿತ್ತು. ನೋಡು ನೋಡುತ್ತಲೆ ಊರ ಸುತ್ತಲಿನ ಗುಡ್ಡೆಯ ಎಲ್ಲಾ ಬಿದಿರ ಮೆಳೆಗಳು ಬೆಳ್ಳಗಾಯ್ತು. ಆಚಾರಿಯ ಉಳಿ ಇನ್ನು ಪೆಟ್ಟಿಗೆಯಲ್ಲಿ ಉಳಿಯಬೇಕಷ್ಟೆ. ಊರಿನ ಜನಕ್ಕೆ ಪಕ್ಕಾಸು ಮಾಡುವಷ್ಟು ಸದ್ಯದ ಮಟ್ಟಿಗೆ ತಾಕತ್ತಿಲ್ಲ ಎನ್ನುವದು ಅವನಿಗೆ ಗೊತ್ತಿತ್ತು. ಆತನಿಗೆ ಬೇರೆ ಉದ್ಯೋಗವು ಒಗ್ಗುವುದಿಲ್ಲವಾದ್ದರಿಂದ ಪರವೂರು ಸೇರುವ ಯೋಚನೆ ಮಾಡಿದ.
ಕರಿಯ ಆಚಾರಿಯಂತೆ ಕುಂಞ ಬ್ಯಾರಿಯ ಬದುಕು ಕೂಡ. ಆತ ಸಂತೆಯಲ್ಲಿ ಬಾಳೆಗೊನೆ, ಕಣಿಲೆ ಮಾರಿ ಬದುಕುವಾತ. ಆತನಿಗೆ ಕಣಿಲೆ ಕುಂಞ ಎಂದೆ ಅಡ್ಡ ಹೆಸರು. ಕಣಿಲೆ ವ್ಯಾಪಾರದಲ್ಲಿ ಆತನಿಗೆ ಹೆಚ್ಚು ಆದಾಯವಿತ್ತು. ಇತ್ತೀತ್ತಲಾಗಿ ಅರಣ್ಯ ಇಲಾಖೆಯವರು ಕಾಡಿಗೆ ಕಾಲಿಟ್ಟರೆ ಅಪರಾಧ ಎನ್ನುತ್ತಿದ್ದುದರಿಂದ ಆತನಿಗೆ ಸ್ವಲ್ಪ ತೊಡಕಾಗಿತ್ತು. ಇಲ್ಲವೆಂದರೆ ಆತನದ್ದು ಕಾಡುತ್ಪತ್ತಿ ವ್ಯಾಪಾರದಿಂದಲೆ ಬದುಕು ಸಾಗುತ್ತಿತ್ತು. ಸೀಗೆಕಾಯಿ, ಕಾನಜೆ, ಇಜಿನ್, ಕಣಿಲೆ ಎಂದು ಸದಾ ಕಾಡುತ್ಪತ್ತಿಯನ್ನೆ ನೆಚ್ಚುತ್ತಿದ್ದ. ಈಗ ಉಳಿದ ಕಾಡುತ್ಪತ್ತಿಯ ವ್ಯಾಪರ ನಿಂತಿದೆ ಆದರೆ ಕಣಿಲೆ ವ್ಯಾಪಾರ ಇತ್ತು. ವರ್ಷದಲ್ಲಿ ಕೆಲವು ಸಮಯ ಮಾತ್ರ ನಡೆಯುವ ವ್ಯಾಪಾರವದು. ವರ್ಷಪೂರ್ತಿ ದೊರೆಯುವ ಸರಕಲ್ಲ. ಈಗ ಅದೂ ಇಲ್ಲವಾಗಿದ್ದು ಆತನ ಆದಾಯಕ್ಕೂ ಬರೆ ಎಳೆದಿತ್ತು. ಆತನೂ ಆದಾಯಕ್ಕೆ ಬೇರೆ ದಾರಿ ಹುಡುಕುತ್ತಿದ್ದ.
‘ನೋಡು ಕರಿಯ ನಾನು ವಿಚಾರಿಸುತ್ತೇನೆ, ಸಂತೆಯಲ್ಲಿ ಇಲ್ಲದವರು ಯಾರು?. ಎಲ್ಲರೂ ಬರುತ್ತಾರೆ. ಒಂದು ಮಾತು ಹೇಳಿದರೆ ಮುಂದಿನ ವಾರ ಒಂದೊಂದು ಕಡೆಯ ವರ್ತಮಾನ ಬರುತ್ತದೆ. ಬಾ ಪಿಜಿನನ ಕ್ಯಾಂಟಿನಲ್ಲಿ ಚಾಕುಡಿದು ಹೋಗುವ’ ಅಂದ
ಕುಂಞ ಬ್ಯಾರಿಯ ತಿಟ್ಟೆಯಿಂದ ಎದ್ದು ಬಸ್‍ಸ್ಟಾಂಡಿಗೆ ಬರುತ್ತಲೆ ಆದಂಬ್ಯಾರಿ ಮತ್ತು ಕೆಲಸದಾಳುಗಳು ಪಿಜಿನ ಮೂಲ್ಯನ ಕ್ಯಾಂಟಿನ್ ಪಕ್ಕ ಲಾರಿ ನಿಲ್ಲಿಸಿ ಚಾ ಕುಡಿಯುತ್ತಿದ್ದರು. ಪಿಜಿನ ಮೂಲ್ಯ ಅವರಿಗೆ ಬೇಕಾದ್ದನ್ನು ಕೊಡುತ್ತಿದ್ದ. ಇವರನ್ನು ನೋಡಿದವನೆÉ ಆದಂ ಬ್ಯಾರಿ
‘ಕರಿಯ ಆಚಾರ್ರೇ ಬನ್ನಿ ಇನ್ನು ನಿಮ್ಮ ಉಳಿ ಸ್ವಲ್ಪ ಪರ್ತೆ ಜಾಸ್ತಿ ಮಾಡಬೇಕು ಮಾರ್ರೆ. ವೇಣೂರಿನಿಂದ ತಂದ ತೆಂಗಿನ ಪಕ್ಕಾಸು ಕಬ್ಬಿಣದ ರಾಡೆ!. ಅಷ್ಟು ಗಟ್ಟಿ. ನೋಡಿ ನಿಮ್ಮ ಬಿದಿರಿನ ಕಥೆ ಈ ವರ್ಷಕ್ಕೆ ಮುಗಿಯಿತು. ಇನ್ನು ಅದಂ ಬ್ಯಾರಿಯ ಪಕ್ಕಸಿಗೆ ಡಿಮ್ಯಾಂಡ್’ ಅನ್ನುತ್ತಾ ಚಾ ಗುಟುಕರಿಸಿ ಮೀಸೆ ನಡುವಿಂದ ಜೋರಾಗಿ ನಕ್ಕ.
ಆದಂ ಬ್ಯಾರಿ ಉಲ್ಲಾಸಿತನಾಗಿದ್ದ. ಬಿದಿರು ಹೂ ಬಿಟ್ಟ ನಂತರ ಲುಕ್ಸಾನಿನಲ್ಲಿ ಸಾಗುತ್ತಿದ್ದ ಪಕ್ಕಾಸಿನ ಬ್ಯಾರಕ್ಕೀಗ ಟಾನಿಕ್ ದೊರಕಿತ್ತು. ಊರಿನಲ್ಲಿದ್ದ ತೆಂಗು ಕಡಿದು ಮಾಡಿದ ಪಕ್ಕಾಸನ್ನು ಕೇಳುವವರಿರಲಿಲ್ಲ. ಮಾಡಿಟ್ಟ ಪಕ್ಕಾಸು ಸೇಲ್ ಆಗದೆ ಮಳೆಗಾಲ ಕಳೆದೊಡನೆ ಹಂಡೆ ನೀರು ಕಾಯಿಸಲು ಲಾಯಕ್ಕಾಗುತ್ತಿತ್ತು. ಈಗ ಪರಿಸ್ಥಿತಿ ಹಾಗಿಲ್ಲ, ಪಕ್ಕಾಸಿಗೆ ಭಾರೀ ಬೇಡಿಕೆ ಬಂದಿದೆ. ಹಾಗಾಗಿ ಆದಂ ಬ್ಯಾರಿಯ ನಗು ಯಾರ ಕಷ್ಟಕ್ಕೂ ಕ್ಯಾರೆ ಅನ್ನುತ್ತಿರಲಿಲ್ಲ.
ವರ್ತನಾಪುರದಲ್ಲಿ ಎಲ್ಲರೂ ತರಾತುರಿಯಲ್ಲಿ ಎಲ್ಲರೂ ಮನೆ ರಿಪೇರಿಗೆ ಶುರು ಮಾಡಿದರು. ಈ ನಡುವೆ ಬಿದಿರಕ್ಕಿಯ ಸಂಗ್ರಹಣೆಯೂ ಶುರುವಾಯಿತು. ಸೇಸಪ್ಪ ಗೌಡರ ಹೆಂಡತಿ ಸುಶೀಲ ಮತ್ತು ಆಳು ಕುಂಜಿರನ ಮಡದಿ ಜಲಜ ಇಬ್ಬರೂ ಸೇರಿ ತಮ್ಮ ತೋಟದ ಪಕ್ಕದಲ್ಲೆ ಇದ್ದ ಬಿದಿರ ಮೆಳೆಯನ್ನು ಅಂಗಳದಂತೆ ಸ್ವಚ್ಛಮಾಡಿದರು. ಬೆಳಿಗ್ಗೆ ಸಂಜೆ ಬಿದಿರಕ್ಕಿ ಸಂಗ್ರಹಣೆ ಶುರುವಾಯಿತು. ಸಂಗ್ರಹವಾದ ಬಿದಿರ ಭತ್ತವನ್ನು ಗುತ್ತಿನ ಅಲ್ಲಾರಿನಲ್ಲಿ ಅಕ್ಕಿಯೂ ಮಾಡಿದರು. ಇಬ್ಬರೂ ಸುಮಾರು ನಾಲ್ಕು ಕಳಸೆ ಅಕ್ಕಿ ಸಂಗ್ರಹಿಸಿದರು. ಅಕ್ಕಿ ಮಾಡಿದರಾಯಿತೆ. ನಾವು ತಿನ್ನುವ ಮೊದಲು ರೊಟ್ಟಿ ಮಾಡಿ ಮೆಳೆಗೆ ಬಡಿಸಬೇಕಲ್ಲ.
ಜಲಜ ತೋಡಿಗೆ ಬಟ್ಟೆ ಒಗೆಯಲು ಬರುವಾಗ ತೋಟದಿಂದ ಬರುತಿದ್ದ ಸುಶೀಲ ಎದುರಾದಳು. ಅವಳನ್ನು ಕಂಡಿದ್ದೆ ‘ಅಲ್ಲ ಸುಶೀಲಕ್ಕ ಬಿದಿರ ಹಿಂಡಿಗೆ ಯಾವಾಗ ಬಡಿಸುವುದು, ರಾಜೀವ ಬಿದಿರಕ್ಕಿ ರೊಟ್ಟಿಗೆ ರಚ್ಚೆ ಹಿಡಿಯುತ್ತಿದ್ದಾನೆ. ಏನು ನಾಳೆ ಬಡಿಸುವಾ ಏನಂತಿರಿ’ ಅಂದಳು.
‘ಹ್ಞಾಂ ಆಯ್ತು ಬಡಿಸುವಾ. ಆ ಮೊಯಿದಿನ್‍ನ ಕೈಯಿಂದ ಮೀನು ತಂಗೊಡರೆ ಸಾಕು. ಭೂತಾಯಿಯೊ, ಬಂಗುಡೆಯೊ ಅಂತು ಮೀನಾದರೆ ರಾಜನ್ ರೊಟ್ಟಿಗೆ ರುಚಿಯಲ್ವಾ’ ಅನ್ನುತ್ತಲೆ
‘ಹೌದು, ಆಯ್ತು ಸಂಜೆಗೆ ಎಲ್ಲಾ ತಯಾರು ಮಾಡಿ ಬಡಿಸುವ.’ ಅನ್ನುತ್ತಾ ತೆರಳಿದರು.
ನೆನ್ನೆಯ ಮಾತಿನಂತೆ ಸಂಜೆ ಸುಶೀಲ ಜಲಜ ಬಿದಿರಕ್ಕಿಯ ರೊಟ್ಟಿಯನ್ನು ಮಾಡಿದರು. ತಮ್ಮ ಮಕ್ಕಳನ್ನು ಕರೆದುಕೊಂಡು, ರೊಟ್ಟಿಯನ್ನು ಭೂತಾಯಿ, ಬಂಗುಡೆ ಮೀನಿನ ಸಾರಿನ ಜೊತೆ ಗಂಟುಕಟ್ಟಿಕೊಂಡರು. ತಾವು ಬಿದಿರಕ್ಕಿ ಸಂಗ್ರಹಿಸಿದ ಬಿದಿರ ಮೆಳೆಗೆ ಬಡಿಸಿದರು. ಮೂರು ತುಂಡು ಬಾಳೆಎಲೆ, ಒಂದು ಚೊಂಬು ನೀರು, ತಲಾ ಎರಡರಂತೆ ಮೂರು ಎಲೆಗೂ ರೊಟ್ಟಿ ಹಾಕಿ, ಅದರ ಮೇಲೆ ಮೀನಿನ ತುಂಡು ಜೊತೆÀಗೊಂದಿಷ್ಟು ಸಾರು. ಆಮೇಲೊಂದು ಎಳ್ಳೆಣ್ಣೆಯಲ್ಲಿ ಅದ್ದಿದ ಬತ್ತಿಯಿಂದ ಆರತಿ ಬೆಳಗಿ ತಪ್ಪು ಒಪ್ಪುಗಳನ್ನು ಬಿನೈಸಿಕೊಂಡರು. ಎರಡು ಎಲೆಯ ರೊಟ್ಟಿ ಮತ್ತು ಮೀನನ್ನು ಮತ್ತೆ ಗಂಟು ಕಟ್ಟಿಕೊಂಡರು. ಒಂದು ಎಲೆಯನ್ನು ಅಲ್ಲೆ ಬಿಟ್ಟು ಬಿದಿರ ಮೆಳೆಗೆ ಅಕ್ಕಿ ನೀಡಿದ್ದಾಕ್ಕಾಗಿ ನೈವೇದ್ಯ ಅರ್ಪಿಸಿದರು. ಅವರು ಮನೆಗೆ ಬಂದ ಮೇಲೆ ಮನೆಯವರಿಗೆಲ್ಲ ರಾಜನ್‍ರೊಟ್ಟಿ ಊಟವಾಯ್ತು. ಅಂತೂ ವರ್ತನಾಪುರ ಸೇರಿದಂತೆ ಅಕ್ಕಪಕ್ಕದ ಊರಿನಲ್ಲಿ ಬಿದಿರಕ್ಕಿ ರೂಟ್ಟಿಯ ಸಮಾರಾಧನೆಯಾಯಿತು. ಮಗಳು ಅಳಿಯ ಸೇರಿದಂತೆ ಪರವೂರಿಗೂ ಬಿದಿರಕ್ಕಿ ಗಂಟು ಹೋಯಿತು. ವರ್ತನಾಪುರದ ಬಿದಿರಕ್ಕಿ ದಾಸ್ತಾನೂ ವರ್ಷವೊಂದರಲ್ಲೆ ಖಾಲಿಯಾಯಿತು.
ಆದಂ ಬ್ಯಾರಿ ಎಲ್ಲವನ್ನು ಚೆನ್ನಾಗಿ ಆಲೋಚನೆ ಮಾಡಿ ಈ ಬಾರಿ ಬ್ಯಾರಕ್ಕೆ ಬಂಡವಾಳ ಹೂಡಿದ. ವೇಣೂರು, ಧರ್ಮಸ್ಥಳ, ನಾರಾವಿ ಕಡೆಯ ತೆಂಗಿನ ತೋಟವನ್ನು ಕಡಿಯುವ ಗುತ್ತಿಗೆಯೂ ಈತನ ಪಾಲಾಯಿತು. ವರ್ತನಾಪುರದ ಬಿದಿರು ಒಂದು ಮಳೆಗಾಲ ಕಳೆಯುವ ಹೊತ್ತಿಗೆ ಪೂರಾ ಹಿಂಡು ಹಿಂಡೆ ನೆಲಕಚ್ಚತೊಡಗಿದವು. ಬಿದಿರೀಗ ಊರ ಜನಕ್ಕೆ ಹಂಡೆ ನೀರು ಕಾಯಿಸಲು ಮತ್ತು ಭತ್ತ ಬೇಯಿಸುವ ಕೆಲಸಕ್ಕೆ ಮಾತ್ರ ಸೀಮಿತವಾಯಿತು. ಪರವೂರಿಗೆ ಬಿಡಿ ವರ್ತನಾಪುರಕ್ಕೆ ಬಿದಿರು ಇಲ್ಲದ್ದು ಆದಂ ಬ್ಯಾರಿಯ ನಸೀಬನ್ನು ಹಸನು ಮಾಡಿತು. ಮೊದಲ ಗಿರಾಕಿಗಳು ಪಕ್ಕದೂರಿನಿಂದಲೆ ಬರತೊಡಗಿದರು. ಕೋಲು ಲೆಕ್ಕದಲ್ಲಿ ವ್ಯಾಪಾರ.
ಬಂದವರಿಗೆಲ್ಲ ‘ಪಕ್ಕಾಸೇ ಇಲ್ಲ ಮಾರಾಯೆರ್ರೆ! ಅಲ್ಲಿಂದ ಇಲ್ಲಿಗೆ ಸಾಗಿಸಿ, ಕೆಲಸದವರಿಗೆ ಮಜೂರಿ ಕೊಟ್ಟು ಪಕ್ಕಾಸು ರೆಡಿ ಮಾಡುವಾಗ ಏನೂ ಗೀಟುವುದಿಲ್ಲ. ನೋಡಿ ಒಳ್ಳೆ ಪಕ್ಕಾಸು, ಎಲ್ಲೂ ಸಿಗಿಲಿಕ್ಕಿಲ್ಲ. ಬೇಕಾದರೆ ತೆಗೆದುಕೊಳ್ಳಿ, ನಾನು ಈ ಬ್ಯಾರವನ್ನೆ ಬಿಡುವ ಅಂತಿದ್ದೇನೆ.’ ಎಂದು ತಾನು ಏರಿಸಿದ ರೇಟಿಗೆ ಅವರನ್ನೂ ಏರಿಸಿ ಮಾಲಿಸು ಮಾಡುತ್ತಿದ್ದ.
ಹೀಗೆ ಬ್ಯಾರದ ಬಿರುಸಿನ ನಡುವೆ ಸೇಸಪ್ಪ ಗೌಡರ ಆಳು ಕುಂಜಿರ ಸಂಜೆಯ ವೇಳೆಗೆ ಮುಖ ಸಣ್ಣಗೆ ಮಾಡಿಕೊಂಡು ಆದಂ ಬ್ಯಾರಿಯ ಪಕ್ಕಾಸಿನ ಪಡ್ಪಿಗೆ ಬಂದ. ಮನೆಯ ಮಾಡು ಹಳತಾಗಿ ಜೀರ್ಣವಾಗಿತ್ತು. ಇಂದೊ ನಾಳೆಯು ಕುಸಿಯುವುದರಲ್ಲಿತ್ತು. ಕೆಲಸದಾಳುಗಳಿಗೆ ಸಂಬಳ ಕೊಡುತ್ತಾ ಸಾಲವನ್ನು ವಜಾ ಮಾಡುತ್ತಾ ಕುಳಿತ್ತಿದ್ದ ಆದಂಬ್ಯಾರಿ ಕುಂಜಿರನನ್ನು ನೋಡಿದವನೆ. ಮೀಸೆಯೆಡೆಯಿಂದ ಕೊಂಚ ಬಾಯಿತೆರೆದು ಸಣ್ಣಗೆ ನಕ್ಕ. ಕುಂಜಿರ “ಆದಮಕ್ಕಾ ನಮ್ಮ ಮನೆಯ ಮಾಡಿಗೊಂದಿಷ್ಟು ಪಕ್ಕಾಸು ಬೇಕು ಎಲ್ಲಾ ದುಡ್ಡು ಒಮ್ಮೆ ಕೊಡಲಿಕ್ಕಾಗದು ಕಂತಿನಲ್ಲಿ ಕೊಡುತ್ತೇನೆ.. ಪಕ್ಕಾಸು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ”
“ಅಯ್ಯೋ ಮರಾಯಾ ಪಕ್ಕಾಸು ಸಾಲ ಕೊಟ್ಟವರ ವಸೂಲಿಗೆ ಹೋಗುವುದೇ ಕಷ್ಟ, ಇನ್ನು ನಿನ್ನ ಬೆನ್ನು ಬೇರೆ ಬೀಳಬೇಕಾ. ನೋಡು ಸೇಸಪ್ಪ ಗೌಡರಲ್ಲಿ ಹೇಗೂ ಮಾಮೂಲಿ ಕೆಲಸವಿದೆ ಅವರಲ್ಲಿಯೇ ಸ್ವಲ್ಪ ಸಾಲ ಮಾಡಿ ಪಕ್ಕಾಸು ತಗೊ. ನಾನು ಸಾಲದ ವ್ಯವಹಾರ ನಿಲ್ಲಿಸಿದ್ದೇನೆ ಕುಂಜಿರ, ವಸೂಲಿಯ ರಂಪ ರಾಯಾಯಣವೇ ಬೇಡ” ಅನ್ನುತ್ತಾ ಮುಖ ತಿರುಗಿಸಿದ. ಕುಂಜಿರನ ಕೆಲಸ ಕೈ ಹತ್ತಲಿಲ್ಲ. ಸೇಸಪ್ಪ ಗೌಡರೆ ಮಾಡಿಗೆ ಪಕ್ಕಾಸು ಹೊಂದಿಸಲು ಹೆಣಗುತ್ತಿದ್ದುರಿಂದ ಮಾಡಿಗೆ ಪಕ್ಕಾಸು ಹಾಕುವುದು ಸಾಧ್ಯವಿಲ್ಲ ಎನ್ನುತ್ತಾ ಮನೆ ಕಡೆ ನಡೆದ.
ವರ್ತನಾಪುರದಲ್ಲಿ ಬಿದಿರಿಲ್ಲದೆ ಮೂರ್ನಾಲ್ಕು ವರ್ಷವಾಯಿತು. ಈ ನಡುವೆ ಕೆಲವು ಮನೆಯವರು ಸಾಲ ಮಾಡಿ, ಅಲ್ಪ ಸ್ವಲ್ಪ ಕೂಡಿಟ್ಟು ಮನೆಗೆ ಪಕ್ಕಾಸು ಹಾಕಿ ಮಾಡು ಗಟ್ಟಿ ಮಾಡಿದರು. ಆದಂ ಬ್ಯಾರಿಯ ವ್ಯಾಪಾರವೂ ಜೋರಾಗಿ ನಡೆಯುತ್ತಿದೆ. ಕುಂಞ ಬ್ಯಾರಿ ಕಣಿಲೆ ಬ್ಯಾರ ನಿಂತ ಮೇಲೆ ಈಗ ಊರೀಡಿ ಒಣ ಮೀನು ಮಾರುವ ಕೆಲಸ ಮಾಡುತ್ತಿದ್ದಾನೆ. ರಾಜನ್ ಅಕ್ಕಿ ಮಾರಿ ಕೊಂಚ ಹಣ ಮಾಡಿದನಾದರೂ ಅದು ಸಮಸ್ಯೆಯನ್ನು ಮುಂದಕ್ಕೆ ದೂಡಿತು ಅಷ್ಟೆ. ಕರಿಯ ಆಚಾರಿ ಅಪರೂಪಕ್ಕೊಮ್ಮೆ ಉಳಿ, ಸುತ್ತಿಗೆ ಪೆಟ್ಟಿಗೆಯೊಂದಿಗೆ ಮಾಡಿನ ಕೆಲಸಕ್ಕೆಂದು ವರ್ತನಾಪುರಕ್ಕೆ ಬಂದು ಕೆಲಸ ಮುಗಿದೊಡನೆ ಆತನ ಸಂಸಾರವಿದ್ದ ಊರಾದ ಅಂಡಿಂಜೆಗೆ ಹೋಗುತ್ತಿದ್ದ. ಅಲ್ಲೀಗ ಆತನಿಗೆ ಕೈತುಂಬಾ ಕೆಲಸವಿತ್ತು. ಆದರೆ ತನ್ನೂರು, ತನ್ನವರೆಂಬ ಕಾರಣಕ್ಕೆ ವರ್ತನಾಪುರದವರು ಹೇಳಿ ಕಳಿಸಿದರೆ ಬಂದು ಹೋಗುತ್ತಿದ್ದ. ಬೇಲಿ ದೊಂಪಗಳಲ್ಲಿ ಕಂಗೊಳಿಸುತ್ತಿದ್ದ ಬಿದಿರಿನ ಜಾಗಕ್ಕೀಗ ಸಮುದ್ರದ ಮೀನಿನ ಬಲೆ ಆಸರೆಯಾಗಿತ್ತು. ದೊಂಪಕ್ಕೂ, ಬೇಲಿಗೂ ಅದೇ ಬಳಕೆಯಾಗುತ್ತಿದೆ. ಕಣಿ, ತೋಡಿನ ಕಾಲು ಸಂಕಕ್ಕೆ ಅಡಿಕೆ ಮರದ ತುಂಡನ್ನು ಪಾಪು ಹಾಕುತ್ತಿದ್ದಾರೆ. ಬಿದಿರ ಭತ್ತ ಮಳೆಗಾಲ ಕಳೆದೊಡನೆ ಮೊಳೆತು, ಹಿಂಡು ಹಿಂಡಾಗಿ ಬೆಳೆದ ಹೊಸ ಬಿದಿರ ಮೆಳೆಗಳು ಆಳೆತ್ತರವನ್ನು ದಾಟಿದೆ. ಬಿದಿರು ನಾಶವಾದ ತನ್ನ ಸಾಮ್ರಾಜ್ಯದಲ್ಲಿ ಮತ್ತೆ ಪಾಳೆಗಾರಿಕೆಯನ್ನು ಆರಂಭಿಸಿದಂತೆ ಕಾಣುತ್ತಿತ್ತು. ಊರಿನ ದಾರಿಯಲ್ಲಿ ನಿಂತು ನೋಡಿದಾಗ ಆಳೆತ್ತರವನ್ನು ದಾಟಿದ ಬಿದಿರ ಮೆಳೆಗಳು ತೇರಿನಂತೆ ಕಾಣುತ್ತದೆ. ಕಾಡಿನಲ್ಲೀಗ ಬಿದಿರ ತೇರಿನ ಜಾತ್ರೆಯೆ ನೆರೆದಿತ್ತು.
ಬಿದಿರು ವರ್ತನಾಪುರದ ಕಾಡಿನಲ್ಲಿ ರಾಜನ್ ಹೋದ ಮೇಲೆ ಕೆಲವರ ಮನೆ ಕುಸಿಯಲು ದಿನ ಎಣಿಸತೊಡಗಿದವು. ಕೆಲವರು ಸಾಲಕ್ಕಾಗಿ ಅರ್ಜಿ ಹಾಕಿ ಯಾಯುತ್ತಿದ್ದರು. ಆದಂ ಬ್ಯಾರಿ ಅಡ್ವಾನ್ಸ್ ಮುಂದಿಡದೆ ಹೋದರೆ ತಲೆ ಎತ್ತಿಯೂ ನೋಡುತ್ತಿರಲಿಲ್ಲ. ಸೇಸಪ್ಪ ಗೌಡರ ಆಳು ಕುಂಜಿರನ ಮಜಲಿನ ಕೊನೆಗಿದೆ. ಆದಂ ಬ್ಯಾರಿ ಸಾಲಕ್ಕೆ ಪಕ್ಕಾಸು ಕೊಡಲಿಲ್ಲ ಊರಲ್ಲೂ ಎಲ್ಲೂ ಸಾಲವೂ ಸಿಗಲಿಲ್ಲ. ಮನೆಯ ಮಾಡು ಜೀರ್ಣಾವಾಗಿ ಇಂದೊ ನಾಳೆಯೊ ಬೀಳುವಂತಿತ್ತು. ಮಳೆಗಾಲವೂ ಬೇಗನೆ ಧಾವಿಸಿತು. ವರ್ತನಾಪುರಕ್ಕೆ ಮಳೆ ಬರುವುದೆಂದರೆ ಆಕಾಶಕ್ಕೆ ತೂತು ಬಿದ್ದ ಹಾಗೆ. ತಿಂಗಳಾನುಗಟ್ಟಲೆ ಧೋ ಧೋ ಎಂದು ಸುರಿಯುತ್ತದೆ. ಕುಂಜಿರನ ಮನೆ ಮಾರಿ ಮಳೆಗೆ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಯ್ತು. ರಾತ್ರಿ ಮಾಡು ಜರಿದ ರಭಸಕ್ಕೆ ಮಗ ರಾಜೀವನ ದೇಹ ಚಿದ್ರವಾಗಿ ನೀರು ರಕ್ತದೊಂದಿಗೆ ಬೆರೆತು ಓಕುಳಿಯಾಗಿತ್ತು. ಮಳೆ, ಮಾಡು ಎರಡೂ ಸೇರಿ ಅವನ ವಂಶದ ಕುಡಿಯನ್ನು ಚಿವುಟಿ ಹಾಕಿತ್ತು. ಕುಂಜಿರನ ಜಲಜಳ ಬೊಬ್ಬೆ ಮಳೆಯ ಜೊತೆಗೆ ಬೆರೆತು ಅಕ್ಕಪಕ್ಕದವರಿಗೂ ಕೇಳಿರಲಿಲ್ಲ. ಕುಂಜಿರ ಸೇಸಪ್ಪ ಗೌಡರಿಗೆ ವರ್ತಮಾನ ಮುಟ್ಟಿಸುವವರೆಗೂ ಯಾರೂ ಇರಲಿಲ್ಲ. ಎಲ್ಲರೂ ಸೇರುವ ಹೊತ್ತಿಗೆ ಮುಂಜಾವಾಗಿತ್ತು. ಮಳೆ ಇನ್ನೂ ಬಿಟ್ಟೂ ಬಿಡದೆ ಸುರಿಯುತ್ತಿತ್ತು. ಕುಂಜಿರನ ಮಗನ ಹೆಣ ಹೊರಲು ಬಿದಿರಿರಲಿಲ್ಲ. ಪಕ್ಕದೂರಿನಲ್ಲಿ ಬೆಳೆಯುತ್ತಿದ್ದ ಕೆಂಪು ಬಿದಿರೆ ಗತಿಯೀಗ. ಅದಕ್ಕೂ ಜನ ಕಳುಹಿಸಿಯಾಯಿತು. ಎಲ್ಲ ಮುಗಿದು ಚಟ್ಟಕ್ಕೆ ಹೆಗಲು ಕೊಡುವಾಗ ಮಧ್ಯಾಹ್ನ. ರಾಜೀವನ ಜೊತೆ ಹಿತ್ತಲಲ್ಲಿದ್ದ ಕಪಿಲೆಯೂ ಗೋಡೆಯ ಮಣ್ಣಿನಡಿಗೆ ಬಿದ್ದು ಮಣ್ಣು ಸೇರಿದ್ದಳು. ಆತÀನ ಜೊತೆ ಕಪಿಲೆಯೂ ಮಣ್ಣಾದಳು.
ಕುಂಜಿರ ಮತ್ತು ಆತನ ಹೆಂಡತಿ ಮನೆ ಕಳೆದುಕೋಡು ಸೇಸಪ್ಪ ಗೌಡರ ಕೊಟ್ಟಿಗೆಯಲ್ಲಿ ನಾಶವಾದ ಮನೆಯೊಂದರ ಕುರುಹುಗಳೆಂಬಂತೆ ಬದುಕುತ್ತಿದ್ದಾರೆ. ಅವರ ಬದುಕಿನಲ್ಲಿ ಯಾವ ಚೈತನ್ಯವೂ ಉಳಿದಿರಲಿಲ್ಲ. ಅವರಿಗೆ ಉಸಿರಾಡುವುದೇ ದೊಡ್ಡ ಕೆಲಸವಾಗಿ ಪರಿಣಮಿಸಿತ್ತು. ಜಾನಕಿಯಂತೂ ಮಗನ ನೆನೆಪಿನಲ್ಲಿ ಕೊರಗಿ ನವೆಯತೊಡಗಿದಳು.
ಊರಿನಲ್ಲಿ ಏನೆ ನಡೆದರೂ ಆದಂಬ್ಯಾರಿಯ ಬ್ಯಾರ ಭರ್ಜರಿಯಾಗಿತ್ತು. ಲುಕ್ಸಾನಿನಲ್ಲಿ ಸಾಗುತ್ತಿದ್ದ ಪಕ್ಕಾಸು ವ್ಯಾಪಾರ ಲಾಭದತ್ತ ಮುಖ ಮಾಡಿ ವರ್ಷಗಳಾಗುತ್ತಾ ಬಂತು. ಲೋಡು ಇಳಿಸುವುದಕ್ಕೆ. ಅಳತೆಗೆ ತಕ್ಕಂತೆ ತುಂಡು ಮಾಡಲು, ಸಿಗಿದ ಪಕ್ಕಾಸನ್ನು ಒಪ್ಪ ಮಾಡಲು, ಮತ್ತೆ ಸೇಲ್ ಆದ ಪಕ್ಕಾಸನ್ನು ಲೋಡು ಮಾಡಲು ಎಲ್ಲದಕ್ಕೂ ಬೇರೆ ಬೇರೆ ಆಳುಗಳು. ಆದಂ ಬ್ಯಾರಿಗೆ ಆರ್ಡರ್ ಪೂರೈಸುವುದು ಕಷ್ಟ ಎನ್ನುವಲ್ಲಿಗೆ ವ್ಯಾಪಾರ ಬಂದು ನಿಂತಿದೆ. ವರ್ತನಾಪುರದ ಜನ ಮಾಡಿಗಾಗಿಯೇ ಸಾಲಗಾರರಾದರು. ಕೆಲವರು ಆದಂ ಬ್ಯಾರಿಗೆ ಚಿಲ್ಲರೆ ದುಡ್ಡು ಕೊಡಲು ಉಳಿಸಿಕೊಂಡು ಮುಖ ತೋರಿಸಲಾಗದೆ ಅಲ್ಲಲ್ಲಿ ಕಣ್ಣು ತಪ್ಪಿಸಿ ಅಡ್ಡಾಡಿದರು.
‘ಆದಂ ಬ್ಯಾರಿಯು ನಡು ರೋಡಿನಲ್ಲಿ ದುಡ್ಡು ಕೇಳಿದ, ನಾವೇನು ಊರು ಬಿಟ್ಟು ಹೋಗುತ್ತೆವೊ. ಬಿದಿರಿಲ್ಲದ ಕರ್ಮಕ್ಕೆ ಅವನ ಕೈಯಲ್ಲಿ ಸಾಲ ಮಾಡಬೇಕಾಯಿತು’ ಎನ್ನುವ ಮಾತುಗಳು ಅಂಗಡಿಯಲ್ಲಿ ಗಡಂಗಿನಲ್ಲಿ ನಾಲ್ಕು ಜನ ಸೇರಿದಾಗ ಕೇಳಿ ಬರುತ್ತಿತ್ತು..
ಸೇಸಪ್ಪ ಗೌಡರೂ ತನ್ನ ಮನೆಯ ಮಾಡು ಜರಿಯುವ ಮೊದಲೆ ಪಕ್ಕಾಸು ಹಾಕುವ ಚಿಂತನೆ ಮಾಡಿದರು. ಕುಂಜಿರನ ಮನೆಯ ಘಟನೆ ಆದ ನಂತರವಂತೂ ಊರ ಜನ ಸಾಲವಾದರೂ ಸರಿ, ಮನೆ ಮಾಡು ಗಟ್ಟಿಯಿದ್ದರೆ ಸಾಕು ಎನ್ನತೊಡಗಿದರು. ಸೇಸಪ್ಪ ಗೌಡರ ಮನೆ ಗಾತ್ರದಲ್ಲಿ ಕೊಂಚ ದೊಡ್ಡದು. ಅಲ್ಪ ಸ್ವಲ್ಪ ಉಳಿಸಿದ ದುಡ್ಡಿನ ಜೊತೆಗೆ ಈ ಬಾರಿಯ ಅಡಿಕೆ ಮಾರಿದ ದುಡ್ಡನ್ನು ಪೂರಾ ಆದಂಬ್ಯಾರಿಗೆ ಕೊಟ್ಟರು.
ಆದಂ ಬ್ಯಾರಿಯೂ ‘ಗೌಡ್ರೆ ನಿಮಗೆ ನಾರಾವಿಯ ಪಕ್ಕಾಸು ಕೊಡುತ್ತೇನೆ. ಎರಡು ತಲೆಮಾರು ಬಿದ್ದರೂ ಕುಂಬಾಗದಂತಹ ಗಟ್ಟಿ ಪಕ್ಕಾಸು ಅದು’ ಎನ್ನುತ್ತಾ ಗೌಡ್ರಿಗೂ ಮಾಲಿಸು ಮಾಡಿದ. ಪಕ್ಕಾಸು ಮನೆಯಂಗಳಕ್ಕೆ ಬಂದು ಬಿದ್ದಾಗಲೆ ಅವನು ಕೊಟ್ಟ ಪಕ್ಕಾಸಿನ ಗಟ್ಟಿ ಬಾಳಿಕೆ ಎಲ್ಲಾ ನಿರ್ಧಾರವಾಗೋದು. ಹಾಗೆ ಮನೆಗೆ ಬರುವ ದಾರಿಯಲ್ಲೆ ಕುಂಞ ಬ್ಯಾರಿಯನ್ನು ಕಂಡು
‘ಕರಿಯ ಆಚಾರಿಗೊಂದು ವರ್ತಮಾನ ಮುಟ್ಟಿಸು ಮಾರಾಯ, ಮನೆಯ ಮಾಡೊಂದು ಅವನ ಕೈಯಲ್ಲಿ ಗಟ್ಟಿಮಾಡಿಸಿ ಬಿಡಬೇಕು’ ಎಂದರು.
‘ಆಯ್ತು ಗೌಡ್ರೆ, ಕರಿಯ ಆ ನೆಪದಲ್ಲಾದರೂ ಊರು ನೋಡುತ್ತಿದ್ದಾನೆ. ಅವನ ಮನೆಯೂ ಬೀಳುವಂತಾಗಿದೆ. ಊರಲಿಲ್ಲದ ಮೇಲೆ ಮನೆಯೇಕೆ ಅಲ್ಲವೇ’ ಎನ್ನುತ್ತಾ ವಿಷಾದ ನಗೆಯೊಂದಿಗೆ ಮೌನವಾದ. ಗೌಡ್ರು ಮನೆ ಕಡೆ ಹೆಜ್ಜೆ ಹಾಕಿದರು.
ಕುಂಞ ಬ್ಯಾರಿಯೀಗ ವರ್ತನಾಪುರಕ್ಕೆ ಮತ್ತು ಅಂಡಿಜೆಗೆ ಸಂಪರ್ಕ ಕೊಂಡಿಯಾಗಿದ್ದ. ಸೋಮವಾರದ ದಿನ ವರ್ತಮಾನ ಹೋಗುತ್ತಿತ್ತು. ಮುಂದಿನ ಸೋಮವಾರ ಅಲ್ಲಿಂದ ವರ್ತಮಾನ ಬರುತ್ತಿತ್ತು.
ಮಾಡು ರಿಪೇರಿಯ ನೆಪದಲ್ಲಿ ಕರಿಯ ಆಚಾರಿ ಅಪರೂಪಕ್ಕೊಮ್ಮೆ ಊರೀಗೆ ಬರತೊಡಗಿದ. ಆಚಾರಿ ವರ್ತನಾಪುರಕ್ಕೆ ಬಂದಾಗಲೆಲ್ಲ ತನ್ನ ಮನೆಯ ಧೂಳು ಜಾಡಿಸುತ್ತಿದ್ದ. ಒಂದೆರಡು ದಿನ ಒಲೆ ಉರಿಯುತ್ತಿತ್ತು. ಮಕ್ಕಿ ಗುಡ್ಡೆಗೆ ಎದುರಾಗಿದ್ದ ಅವನ ಮನೆಯಿಂದ ಬಿದಿರ ಬೆಳವಣಿಗೆಯ ಪ್ರತಿ ಹಂತವನ್ನು ನೋಡಬಹುದಿತ್ತು. ಬಿದಿರು ಹೂಬಿಟ್ಟು ವರ್ಷಕಳೆಯುವುದರೊಳಗೆ ಬೋಳಾದ ಗುಡ್ಡ ಮೂರು ನಾಲ್ಕು ವರ್ಷವಾಗುತ್ತಲೆ ಮತ್ತೆ ಚಿಗುರಿ ಹಸಿರು ತುಂಬಿಕೊಂಡಿದೆ. ಇನ್ನೆರಡು ವರ್ಷದಲ್ಲಿ ಮಾಡಿನ ಉಪಯೋಗಕ್ಕೆ ಬರಬಹುದು. ಆದರೆ ಅಷ್ಟೊತ್ತಿಗಾಗಲೆ ವರ್ತನಾಪುರದ ಜನ ಪಕ್ಕಾಸಿನ ಮಾಡು ಮಾಡಿರುತ್ತಾರೆ. ಇನ್ನು ಇಲ್ಲಿ ನನಗೇನು ಕೆಲಸವಿದೆ. ಹೆಂಡತಿ ವರ್ತನಾಪುರವೇ ಚೆನ್ನಾಗಿತ್ತು ಅಂದಾಗ ಅವನಿಗೆ ದುಃಖ ಉಮ್ಮಳಿಸುತ್ತದೆ. ಅನ್ನಕ್ಕಾಗಿ ಪರದೇಶಿಯಾಗಲು ಒಗ್ಗಬೇಕು, ಇಲ್ಲವಾದರೆ ಮಣ್ಣಾಗಬೇಕು. ಬಡವನಿಗೆ ಇದೆರಡು ನಿತ್ಯ ಸತ್ಯ. ಹೀಗಾಗಿ ಪಕ್ಕಾಸು, ಟೆರೆಸಿನ ಮೊರೆ ಹೋದ ವರ್ತನಾಪುರಕ್ಕೆ ಕರಿಯ ಆಚಾರಿ ಅಪರಿಚಿತನಾಗುತ್ತಾ ಬಂದ.
ಆದಂಬ್ಯಾರಿಯ ಜೊತೆ ಆದಾಯ ಚೆನ್ನಾಗಿ ಕೈ ಸೇರಿದ್ದು ಜೋಸೆಫ್ ಪೊರ್ಬಿಗೆ. ಬಿದಿರು ಹೂಬಿಟ್ಟ ಒಂದು ವರ್ಷ ವರ್ತನಾಪುರದ ಜನ ಭತ್ತ ಮನೆಯಲ್ಲೆ ಬೇಯಿಸಿ ಗುತ್ತಿನ ಅಲ್ಲಾರಿನಲ್ಲಿ ಅಕ್ಕಿ ಮಾಡಿದರು. ಮರು ವರ್ಷದಿಂದ ಬಿದಿರ ಕಟ್ಟಿಗೆ ಸಿಗದಿರುವುದರಿಂದ ಮನೆಯಲ್ಲೆ ಅಕ್ಕಿ ಮಾಡುವ ಉಸಾಬರಿಗೆ ಯಾರು ಮನಸ್ಸು ಮಾಡಲಿಲ್ಲ. ಎಲ್ಲರೂ ಮಿಲ್ಲಿಗೆÀ ಒಯ್ಯಲಾರಂಭಿಸಿದರು. ಮಿಲ್ಲಿನ ಮಜುರಿ ಜಾಸ್ತಿಯಾದರೂ ಮನೆಯಲ್ಲಿ ಭತ್ತ ಬೇಯಿಸುವ ದುಸ್ಸಾಹಸಕ್ಕೆ ಯಾರೂ ಕೈ ಹಾಕಲಿಲ್ಲ. ಹೀಗಾಗಿ ಜೋಸೆಫ್ ಪೊರ್ಬಿಗೂ ಅವನ ಕೆಲಸದಾಳುಗಳಿಗೂ ಪುರುಸೊತ್ತಿಲ್ಲ. ಭತ್ತ ತೂಗಲು, ನೆನೆಹಾಕಲು, ಬೇಯಿಸಲು, ತೊಡಲು, ಹರಡಲು, ಒಣಗಿಸಿ ಅಕ್ಕಿ ಮಾಡಲು ಮತ್ತು ಮಜುರಿ, ಅಕ್ಕಿಯ ಲೆಕ್ಕಚಾರ ಮಾಡಲು ಎಲ್ಲದಕ್ಕೂ ಆಳುಗಳಿದ್ದಾರೆ. ಆದಂ ಬ್ಯಾರಿ ಮತ್ತು ಜೊಸೆಪ್ ಪೊರ್ಬಿಗೆ ವ್ಯವಹಾರ ಕೈ ಹತ್ತಿತು.
ಊರಿನ ಈ ಎಲ್ಲಾ ಸಂಕಟಗಳಿಗೆ ಏನೋ ಕಾರಣವಿರಬೇಕೆಂದು ಕಟ್ಟೆ, ಚಾವಡಿಗಳಲ್ಲಿ ಚರ್ಚೆಯಾಯಿತು. ಕೊನೆಗೆ ಈ ಚರ್ಚೆ ನಾರಾಯಣ ತಂತ್ರಿಯವರಲ್ಲಿ ಅಷ್ಟಮಂಗಲ ಪ್ರಶ್ನೆ ಕೇಳುವಲ್ಲಿಗೆ ತುದಿಮುಟ್ಟಿತು. ದಪ್ಪ ಮೀಸೆ ಅಗಲ ಮುಖದ ತಂತ್ರಿಯವರು ಮೈ ಪೂರ್ತಿ ಗಂಧದ ಪಟ್ಟೆ ಎಳೆದುಕೊಂಡು ಗಂಭೀರವಾಗಿ ಕೂತು ಪೂಜೆ, ಹೋಮ ನೆರವೇರಿ1ಸಿದರು. ಹೋಮದ ಬೆಂಕಿಯಲ್ಲಿ ಕುತ್ತಿಗೆಯಲ್ಲಿದ್ದ ಬಂಗಾರದ ಪಟ್ಟೆ ಸರ ಫಳಫಳ ಮಿನುಗುತ್ತಿತು. ಹೋಮದ ಧೂಮ ಮುಖದ ಚಹರೆಯನ್ನು ಕ್ಷಣ ಕ್ಷಣಕ್ಕೂ ಬದಲಿಸುತ್ತಿತ್ತು. ಮುಖದಲ್ಲಿ ಬೆವರು ಒಸರಿದಂತೆ ಕೆಂಪು ಶಲ್ಯದಿಂದ ಒರೆಸಿಕೊಳ್ಳುತ್ತಾ ಮಂತ್ರದೊಂದಿಗೆ ಹವಿಸ್ಸು ಅರ್ಪಿಸುತ್ತಿದ್ದರು. ಪೂಜೆ ಎಲ್ಲಾ ಮುಗಿದ ನಂತರ ತಂತ್ರಿಗಳು ‘ಆ ಬನ್ನಿ ಮುಖಂಡರೆ ಪ್ರಾರ್ಥನೆ ಮಾಡುವಾ’ ಎನ್ನುತ್ತಾ ಕಣ್ಣು ಮುಚ್ಚಿ ತುಟಿಯಾಡಿಸುತ್ತಾ ಗಂಭೀರವಾದರು. ಜನ ತಂತ್ರಿಯವರ ಏನು ಹೇಳುತ್ತಾರೊ ಎಂದು ಅವರ ಮುಖವನ್ನೇ ದಿಟ್ಟಿಸತೊಡಗಿದರು. ಆಳುಗಳು ನಾನ ತರದ ರೇಖೆಯೆಳೆದ ಬಲಿಮೆಯ ಮಣೆಯನ್ನು ತಂದಿಟ್ಟರು. ತಂತ್ರಿಗಳು ಕೈ ಚೀಲದಿಂದ ಮುಷ್ಟಿಯಷ್ಟು ಕವಡೆಯನ್ನು ತಗೆದು ಮಣೆಯ ಮಧ್ಯಕ್ಕೆ ಸುರಿದರು. ಕೆಲವೊಂದನ್ನು ಆಯ್ಕೆ ಮಾಡಿ ಮಣೆಯ ನಾಲ್ಕು ದಿಕ್ಕುಗಳಿಗೂ ಕವಡೆಯಿಟ್ಟರು. ಇದೆಲ್ಲ ನಡೆಯುತ್ತಿರಬೇಕಾದರೆ ತುಟಿ ದನಿಯಿಲ್ಲದ ಮಂತ್ರ ಹೇಳುತ್ತಿತ್ತು. ತಂತ್ರಗಳು ಕವಡೆಯ ರಾಶಿಯನ್ನು ತಿರುವಲಾರಂಭಿಸಿದರು. ಆವರಿಸಿದ ಮೌನದ ನಡುವೆ ಕವಡೆಗಳು ಒಂದರ ಮೇಲೊಂದು ಸರಿಯುತ್ತಾ ಕರಕರ ಶಬ್ಧದೊಂದಿಗೆ ತಂತ್ರಿಗಳ ಕೈಯೊಳಗೆ ತಿರುಗಿತ್ತಿದ್ದವು. ಗಕ್ಕನೆ ತಿರುವುದನ್ನು ನಿಲ್ಲಿಸಿದ ತಂತ್ರಗಳು ಕಣ್ಣು ಬಿಟ್ಟರು. ಕೂಡಲೆ ಕವಡೆ ರಾಶಿಯಿಂದ ಒಂದಷ್ಟು ಕವಡೆ ಹೊರತೆಗೆದು ಲೆಕ್ಕ ಹಾಕಿದವರೆ “ನೋಡಿ ದೇವಸ್ಥಾನಕ್ಕೆ ಅಪಚಾರವಾಗಿದೆ. ಮುಟ್ಟಿನ ಹೆಣ್ಣೊ, ಸೂತಕದವರೊ ದೇವಸ್ಥಾನ ಪ್ರವೇಶ ಮಾಡಿದ್ದಾರೆ. ದೇವರ ಶಕ್ತಿ ಕುಂದಿದೆ. ಅದಕ್ಕಾಗಿಯೇ ಗುಡ್ಡೆಯ ಬಿದಿರು ಒಮ್ಮೆಗೆ ನಾಶವಾಗಿದ್ದು, ಮಳೆಯ ನೀರು ನಿಲ್ಲದೆ ನದಿ ತೋಡುಗಳು ಬತ್ತುವುದು. ಜನ ಖಾಯಿಲೆ ಬೀಳುವುದು. ಮಳೆಬೆಳೆ ಕೈಕೊಡುತ್ತಿರುವುದು” ಎಂದರು. ಗುಸುಗುಸು ಮಾತು ಆರಂಭವಾಯಿತು. ತಪ್ಪು ಮಾಡಿದವರ ಮೇಲೆ ಸಿಟ್ಟು, ಆಕ್ರೋಶ ಒಮ್ಮಗೆ ಹೊರ ಬಂದವು. ಸೇಸಪ್ಪ ಗೌಡರು ಪರಿಸ್ಥಿತಿ ತಿಳಿಯಾಗಲು ‘ತಂತ್ರಿಗಳೆ ಅಪಚಾರ ಆದದ್ದು ಆಯಿತು. ಮನುಷ್ಯರಲ್ಲದೆ ಇದೆಲ್ಲ ಪರಿಹಾರವಾಗಬೇಕಾದರೆ ದೇವಸ್ಥಾನ ಆದಷ್ಟು ಬೇಗ ಜಿರ್ಣೋದ್ಧಾರವಾಗಬೇಕೆಂಬ ಸೂಚನೆಯಾಯಿತು. ಊರವರು ಅಷ್ಟಮಂಗಳ ಕೇಳಿದ ತಪ್ಪಿಗೆ ಜೀರ್ಣೋದ್ಧಾರದ ಶಿಕ್ಷೆಯಾಯಿತು. ಜನ ಗಾಯದ ಮೇಲೆ ಬರೆ ಎಳೆದುಕೊಂಡರು. ಸಾಲದ ಬದುಕಿಗೆ ದೇವರು ಹೊರೆಯಾದ. ದುಡಿಮೆಯ ದುಡ್ಡಿನಲ್ಲಿ ಸಾಲಕ್ಕೆ, ಕೃಷಿಗೆ, ವೈದ್ಯರಿಗೆ, ಶಿಕ್ಷಣಕ್ಕೆ ಜೊತೆಗೆ ದೇವರಿಗೆ ಮೀಸಲಿಡಬೇಕಾಯಿತು. ವರ್ತನಾಪುರದ ವರ್ತನೆ ದಿನೇ ದಿನೇ ವಿಚಿತ್ರವಾಗತೊಡಗಿತು. ಪ್ರಕೃತಿ ತನ್ನ ಒಂದು ಪಾಶ್ರ್ವದ ವೃಕ್ಷ ಸಂಕುಲವೊಂದನ್ನು ಅಮಾನತಿನಲ್ಲಿಟ್ಟಿದ್ದು ಮನುಷ್ಯನಿಗೆ ತಡೆದುಕೊಳ್ಳಲಾಗಲಿಲ್ಲ. ಇನ್ನು ಪ್ರಕೃತಿ ಪೂರ ಮುನಿದರೆ...
ಪ್ರಶಾಂತ್ ದಿಡುಪೆ.
ಗಡಂಗು: ಸೆಂದಿ ಮಾರುವ ಅಂಗಡಿ
ಬೈರಾಸು: ವಲ್ಲಿ, ಟವೆಲ್
ಪಕ್ಕಾಸು: ಕಾಲಗುಂಜಿ, ಗಳ
ಬಸಳೆ: ಬಂದು ಬಗೆಯ ತರಕಾರಿ
ದೊಂಪ: ಚಪ್ಪರ
ಕಣಿಲೆ: ಎಳೆ ಬಿದಿರು
ಕ್ರಯ: ರೇಟು
ರಾಜನ್: ಬಿದಿರಿನ ಅಕ್ಕಿ
ಬಡ್ಡಾಗು: ಮೊನಚು ಕಳೆದುಕೊಳ್ಳು
ಮೇಳೆ: ಬಿದಿರಗುಂಪು
ಅಲ್ಲರ್: ಅಕ್ಕಿಮಾಡುವ ಯಂತ್ರ
ಕಂಡಾಬಟ್ಟೆ: ಸಿಕ್ಕಾಪಟ್ಟೆ
ಬ್ಯಾರ: ವ್ಯಾಪಾರ
ಲುಕ್ಸಾನ್: ನಷ್ಟ
ಪಲ್ಲ: ಗುಡ್ಡ, ಬೆಟ್ಟದಲ್ಲಿ ನೀರು ಸಂಗ್ರಹವಿರುವ ಜಾಗ
ತಾಪತ್ರಯ: ಉಪದ್ರ, ಕಿರಿಕಿರಿ
ಮಿಲ್ಲು: ಅಕ್ಕಿ ಮಾಡುವ ಯಂತ್ರಗಳಿರುವ ಜಾಗ, ಜಿನ್ನ್
ಬ್ಯಾರಿ: ತುಳುವಿನಲ್ಲಿ ಮುಸ್ಲಿಂರನ್ನು ಕರೆಯುವ ಸಮನಾರ್ಥಕ ಪದ
ಬಲಿಮೆ: ಜ್ಯೋತಿಷ್ಯ
ಪ್ರಕೃತಿಯಲ್ಲಿ ಬದಲಾವಣೆಯಾದಾಗ ಅದು ಜನರ ಜೀವನಕ್ಕೆ ಹೇಗೆ ಪರಿಣಾಮ ಬೀಳುತ್ತದೆ ಎಂಬುವುದು ಈ ಕಥೆಯಲ್ಲಿ ಸವಿಸ್ತಾರವಾಗಿ ಚಿತ್ರಿತಗೊಂಡಿದೆ. ಈ ಕಥೆಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಇರುವ ವ್ಯಕ್ತಿಗಳ ಪ್ರತಿಬಿಂಬವೇನೂ ಎಂಬಂತೆ ಭಾಸವಾಯಿತು. ಧನ್ಯವಾದಗಳು ಈ ಸುಂದರ ಕಥೆಗಾಗಿ
ಪ್ರತ್ಯುತ್ತರಅಳಿಸಿSuper
ಪ್ರತ್ಯುತ್ತರಅಳಿಸಿಭಾರೀ ಶೋಕು ಮಲ್ತ್ ಬರೆತರ್ ಅಣ್ಣಾ....
ಪ್ರತ್ಯುತ್ತರಅಳಿಸಿ👌👌👌
ಪ್ರತ್ಯುತ್ತರಅಳಿಸಿSuperb Anna..... All The Best.
ಪ್ರತ್ಯುತ್ತರಅಳಿಸಿ👍👏👏all the best bro
ಪ್ರತ್ಯುತ್ತರಅಳಿಸಿಅರ್ಥ ಪೂರ್ಣವಾಗಿದೆ....
ಪ್ರತ್ಯುತ್ತರಅಳಿಸಿಹೀಗೆ ಬರೆಯುತ್ತಿರಿ....ಕಥೆಯ ಮೂಲಕ ಜನರಿಗೆ ಬದಲಾವಣೆಗಳು ವೇಗವಾಗಿ ತಲುಪಬಹುದು ಮತ್ತು ಅರ್ಥೈಸಿಕೊಳ್ಳಬಹುದು ಕೂಡ...
ಪ್ರತ್ಯುತ್ತರಅಳಿಸಿ👌👌👍
ಪ್ರತ್ಯುತ್ತರಅಳಿಸಿPacchu brother spr Ave
ಪ್ರತ್ಯುತ್ತರಅಳಿಸಿನಿಸರ್ಗದಲ್ಲಿ ಆಗುವ ಬದಾವಣೆಗಳನ್ನು ಮತ್ತು ಅದರಿಂದ ಜನರ ಜೀವನದಲ್ಲಿ ಆಗುವ ಬದಲಾವಣೆಗಳನ್ನು ಬಹಳ ಅರ್ಥಪೂರ್ಣವಾಗಿ ತಿಳಿಸಿದ್ದೀರಿ.... 👌👌👌
ಪ್ರತ್ಯುತ್ತರಅಳಿಸಿ👌👌👏👏
ಪ್ರತ್ಯುತ್ತರಅಳಿಸಿ