ಹೂ ಬಾಡಿತು
ಹಸಿರು ಮರದ ಟೊಂಗೆಯ
ಹೂ ಅರಳಿತು
ನಿನ್ನೆ, ನಿನ್ನೆ ಮುಂಜಾವ ಮಂಜಿನಲಿ
ಮೊಗ್ಗಾಗಿ ನಕ್ಕ ಹೂ ಅರಳಿತು
ಹಕ್ಕಿ ತುದಿಗೆಲ್ಲ ಎಲೆಯಲಿ ಕುಳಿತು
ಮಧುವ ಹೀರಿತ್ತು
ದಿನ ಮುಗಿದು ರಾತ್ರಿ ಸರಿದು
ಬೆಳಕು ಹರಿದಾಗ
ಸುಕ್ಕಾಗಿ ಮುರುಟಿತ್ತು
ಹಗಲ ಬೆಳಕಲಿ ಕಂಗೊಳಿಸಿ
ಕತ್ತಲ ನೀರವತೆಯಲಿ ಮುದುಡಿತ್ತು
ಮೊಗ್ಗಾಗಿ ಕಣ್ಣು ಕುಕ್ಕಿತ್ತು
ಅರಳಿ ರಮಿಸಿತ್ತು
ದಿನ ಒಂದು ಕಳೆದಿತ್ತು
ಹಸಿರ ಪೊರೆಯಲಿ ಹುದುಗಿತ್ತು
ಕಳಚಿ ಹೊರಬಿತ್ತು
ಸೊಗಸಾಗಿತ್ತು,
ಮರುದಿನ ಕೆಳಗಿತ್ತು
ಕಟ್ಟುವ ಕೈ ಸೋಕಿತು ದೇವರ ಶಿರವೇರಿತು
ದೀಪದ ಬೆಳಕು ಮಿನುಗಿತ್ತು
ಹಲವು ಕಣ್ಣುಗಳ ತನ್ನೆಡೆಗೆ ಸೆಳೆದಿತ್ತು
ಹೊತ್ತು ಮುಳುಗುವುದರೊಳಗೆ
ಹಳೇ ಗೆಳೆಯರ ಸೇರಿತ್ತು
ಇಬ್ಬನಿ ಸುರಿವಾಗ
ಬಣ್ಣವಿತ್ತು, ಅಂದವಿತ್ತು, ನವಿರಾಗಿತ್ತು
ಬೆಳಕು ಕಳೆಗುಂದಿತು ತಮ ಆವರಿಸಿತು
ಹೂ ಬಾಡಿತು.
ದುಂಬಿಗಳ ಝೇಂಕಾರ ರವದಲಿ
ಹಾರಾಟ ಮೇಲಾಟದಲಿ
ಗರ್ಭನಿಂತಿತು
ಅದೇ ನಗುವಿನ ಸಲ್ಲಾಪದಲಿ
ದಿನ ಕಳೆಯಿತು
ತೊಟ್ಟು ಕಳಚಿತು
ಭಕ್ತಿಗೆ, ಅಂದಕೆ, ಸುಖಕೆ
ಕೊನೆಗೆ ಆಘ್ರಾಣಿಸಿ ಅನುಭವಿಸಲು
ಮೊಗ್ಗಾಗಿ ಹೂವಾಗಿ ಕಾಯಾಗಿ
ದಿನವೊಂದು ಕಳೆಯಿತು
ಆಕಾಶಕ್ಕೇರಿದ ಮುಖ
ಭೂಮಿಗೆ ಇಳಿದಿತ್ತು
ಬೀಜ ಮಣ್ಣು ಸೇರಿತು
ಮತ್ತೆ, ಅದೇ ಸತ್ವ ಅದೇ ಕಸುವು
ಗಾರು ನೆಲವ ಸೀಳಿ ಹೊರಬಿತ್ತು
ದಿನದ ಹಂಗು ಕಳಚಿತು
ಆಯುಷ್ಯ ಮರಳಿತು
:-ಪ್ರಶಾಂತ್ ದಿಡುಪೆ
:-ರೇಖಾ ಚಿತ್ರ: ವಿಜಯ್ ರಮೇಶ್ ಬೋಳಶೇಟ್ಟಿ, ಹಂಪಿ
Nice re
ಪ್ರತ್ಯುತ್ತರಅಳಿಸಿChenagide sit
ಪ್ರತ್ಯುತ್ತರಅಳಿಸಿChinagide Sir
ಅಳಿಸಿ