ಪರಮೇಶಿಯ ಪಾದಯಾತ್ರೆ
ಪರಮೇಶಿ ಅದಾವ ಕ್ಷಣದಲ್ಲಿ ಚಾಪೆಯಿಂದ ದಡಕ್ಕನೆ ಎದ್ದಿದ್ದನೊ ತನ್ನ ಮುರುಕಲು ಪಂಚೆಯನ್ನೆತ್ತಿಕೊಂಡ. ಅದನ್ನ ಪಂಚೆಯೆಂದು ಆತ ಉಟ್ಟುಕೊಂಡಿರುವುದರಿಂದ ಹೇಳಬಹುದಷ್ಟೇ, ಅದರಲ್ಲಿ ಸಾವಿರ ತೂತು ಬಿದ್ದು ಅಕ್ಷರಶಃ ಮೀನಿನ ಬಲೆಯಂತಾಗಿತ್ತು. ಆಗತಾನೆ ಸ್ಕೂಲಿನಲ್ಲಿ ಪ್ರಪಂಚದ ಭೂಪಟವನ್ನು ಅವಸರದಲ್ಲಿ ನೊಡಿ ಬಂದ ಹೈಕಳಾಗಿದ್ದರೆ ಅರೇ ಇದೇನು ಪರಮೇಶಿ ಪ್ರಪಂಚವನ್ನೇ ಸುತ್ತಿಕೊಂಡಿದ್ದಾನಲ್ಲ ಎಂದು ಬಾಯಿ ಬಿಡುತ್ತಿದ್ದರು.
ಎದ್ದವನೇ ಸೀದಾ ಮಾವಿನ ಮರದ ಬಳಿ ಓಡಿದ. ಆತ ಬೆಳಗ್ಗಿನ ಜಾವ ಮೊದಲು ಭೇಟಿ ನೀಡುವ ಸ್ಥಳವದು. ಪ್ರಪಂಚ ಫಾರ್‍ವರ್ಡ್ ಆಗಿದ್ದರೂ ಪರಮೇಶಿ ಇನ್ನೂ ಬ್ಯಾಕಲ್ಲೇ ಇದ್ದ. ಹೆಂಡತಿ ಪೂರ್ವಿ ಸಾವಿರ ಸಾರಿ ಪೇಸ್ಟ್ ತನ್ನಿ ಎಂದರೂ ಅದರಲ್ಲಿ ಮೂಳೆ ಪುಡಿ ಇದೆ ಅದರಲ್ಲಿ ಬೆಳಗಾಗಿ ಎದ್ದು ಹಲ್ಲುಜ್ಜೊದ ಎಂದು ಹೆಂಡತಿಯ ಬಾಯಿಗೆ ಬೀಗ ಹಾಕಿದ್ದ. ಆತನೂ ಜಿಪುಣಾಗ್ರೇಸರ, ಎಲ್ಲರೂ ವಸ್ತುವಿನ ಒಳ್ಳೆಯ ಗುಣವನ್ನು ಕೇಳುವುದರಲ್ಲಿ ಇಂಟರೆಸ್ಟ್ ತೊರಿಸಿದ್ರೆ ಈತ ಅದರಿಂದಾಗುವ ಅಡ್ಡಪರಿಣಾಮಗಳನ್ನು ರಿಸರ್ಚ್ ಮಾಡಿ ತಿಳಿದವನಂತೆ ತನ್ನದೆ ಕಟ್ಟುಕತೆಗಳನ್ನು ಕಟ್ಟಿ ಬೊಗಳೆ ಬಿಡುತ್ತಿದ್ದ. ಬೇಗ ಬೇಗ ಗೆಲ್ಲೊಂದರಿಂದ ಎಲೆಯೊಂದನ್ನು ಕಿತ್ತು, ಬಾಯಿಯಿಂದ ಗಾಳಿ ಬೆಳಕನ್ನು ಸವಿಯಲು ಹೊರಗೆ ಬಂದಂತಿದ್ದ ಹಲ್ಲನ್ನು ತಿಕ್ಕತೊಡಗಿದ. ಆತನ ಮುಖವನ್ನು ಮೊದಲ ಬಾರಿ ನೋಡಿದವರು ಮುಂದೆ ಅಪರೂಪಕ್ಕೆ ಸಿಕ್ಕಿದರೆ ಅನಾಯಾಸವಾಗಿ ಗುರುತು ಹಿಡಿಯುತ್ತಿದ್ದುದು ಆತನ ಹಲ್ಲಿನಿಂದ. ಒಂದರ ಮೇಲೊಂದರಂತೆ ಜಿದ್ದಿಗೆ ಬಿದ್ದವರ ಹಾಗೆ ಬೆಳೆದಿದ್ದ ಹಲ್ಲುಗಳು ಬಾಯೊಳಗೆ ಗುದ್ದಾಡಿದ್ದು ಸಾಲದಕ್ಕೆ ಬಾಯಿಂದ ಹೊರಗೆ ಬಂದು ಸಮಾಧಾನಗೊಂಡಿದ್ದವು. ಇನ್ನು ಆತನ ಎದುರು ನಿಂತು ಮಾತಾಡುವುದು ಸಾಹಸವೇ. ಯಾಕೆಂದರೆ ಆತನ ಬಾಯಿಂದ ಸಿಡಿಯುವ ಅನ್ ಲಿಮಿಟೆಡ್ ಜೊಲ್ಲಿಗೆ ಹಲ್ಲಿನ ಗೊಡೆಯಿಲ್ಲದೆ ಕೆಲವೊಮ್ಮೆ ಗಡಿಯನ್ನು ಮೀರಿ ಎದುರಿದ್ದವರ ಮೇಲೆ ಆಕ್ರಮಣ ಮಾಡುತ್ತಿತ್ತು.
ಈ ದಿನ ಪರಮೇಶಿ ಬೇಗನೆ ಹಲ್ಲುಜ್ಜಿದವನೆ ಬ್ಯಾಗಿಗೆ ಎರಡು ಜೊತೆ ಬಟ್ಟೆಗಳನ್ನು ತುರುಕತೊಡಗಿದ. ಪೂರ್ವಿ ಇದನ್ನು ನೋಡಿ ಹೌಹಾರಿದಳು. ‘ಇದೇನ್ರೀ.. ನೀವು ಗಂಟು ಮೂಟೆ ಕಟ್ಟೊ ಸೀನ್ ನೋಡಿದ್ರೆ ತೀರ್ಥಯತ್ರೆ ಹೊರಡೊ ಹಾಗಿದೆ’ ಎಂದು ಒಂದೇ ಉಸಿರಿನಲ್ಲಿ ದಮ್ಮು ಕಟ್ಟಿ ಒದರಿದಳು. ಪರಮೇಶಿಯು ಪರಮಾನಂದದಿಂದ ಹೆಂಡತಿಯ ಜಾಣ್ಮೆಗೆ ತಲೆದೂಗುತ್ತ, ಹಲ್ಲಿನ ಮೇಲೆ ಬಿದ್ದು ಹೊರಳುತ್ತಿದ್ದ ತುಟಿಯನ್ನು ಸರಿಸಿ, ‘ಬಲು ಜಾಣೆ ಕಣೇ ನೀನು ಎಷ್ಟು ಬೇಗ ಕಂಡುಹಿಡಿದು ಬಿಟ್ಟೆ’ ಅಂದ. ಇಷ್ಟು ಹೇಳಿದ್ದೆ ತಡ ಪೂರ್ವಿಯ ದುಃಖದ ಅಣೆಕಟ್ಟಿಗೆ ಲಾಡೆನ್ ಬಾಂಬಿಟ್ಟ ಹಾಗಾಯಿತು. ಪರಮೇಶಿಯ ಕೈ ತನಗರಿವಿಲ್ಲದಂತೆ ಕಿವಿ ಮುಚ್ಚಿದ್ದರಿಂದ ಕಿವಿ ತಮಟೆ ಉಳಿಯಿತು. ಇಲ್ಲವಾದರೆ ಆತನ ತೋಟ ಮನೆಯಿಂದ ದೂರವಾಗುತ್ತಿತ್ತು. ‘ಅಯ್ಯೋ.. ಅಮ್ಮಾ ನಾನೇನು ಮಾಡ್ಲಿ.. ನನ್ನ ಗಂಡ ನನ್ನನ್ನು ಬಿಟ್ಟು ಹೊದ್ನಲ್ಲ್ಲ ಅಯ್ಯೋ ದೇವರೆ.. ನಾನು ಅನಾಥಳಾದೆ. ಒಬ್ಬಂಟಿಯಾಗಿ ಹೇಗೆÀ ಬದುಕಲಿ’ ಎಂದು ಲಬಲಬನೆ ಎದೆಬಾಯಿ ಬಡಿದುಕೊಂಡಳು. ಪರಮೇಶಿಗೆ ಒಂದು ಕ್ಷಣ ದಂಗಾಗಿ ಹೊಯಿತು. ಅರೇ ಇದೇನು ಅಚಾತುರ್ಯವಾಯಿತು ಎಂದುಕೊಂಡು ಕಿವಿ ಮುಚ್ಚಿಕೊಂಡೆ ಆಕೆಯ ಬಳಿ ಕೈ ಸನ್ನೆಯಲ್ಲಿ ಸುಮ್ಮನಿರುವಂತೆ ಸೂಚಿಸಿದ. ಆತನ ಸನ್ನೆ ವರ್ಕ್‍ಔಟ್ ಆಯಿತು. ಸೌಂಡ್‍ನ ಔಟ್‍ಪುಟ್ ನಿಧಾನವಾಗಿ ಕಡಿಮೆಯಾಯಿತು. ಪರಮೇಶಿಗೆ ಹಿತವಾಗುವಷ್ಟರ ಮಟ್ಟಿಗೆ ವಾಲ್ಯೂಮ್ ಕಡಿಮೆಯಾದಾಗ ಕಿವಿಯಿಂದ ಕೈ ತೆಗೆದು ಹೆಂಡತಿಯ ತಲೆ ನೇವರಿಸಿ, ‘ಏ ಪೂರ್ವಿ ನಿನ್ನನ್ನು ಬಿಟ್ಟು ನಾನಿರ್ತೆನೆಯೇ? ನೀನು ನನ್ನ ಜೀವ ಕಣೇ, ಅಯ್ಯೋ ಚಿನ್ನ ಯಾಕೆ ಇಷ್ಟೊಂದು ಬೇಜಾರು ಮಾಡ್ಕೋತ್ತಿಯಾ?’ ಅಂದ. ಪರಮೇಶಿಯ ಸಿಹಿ ಮಾತಿನಿಂದ ಪೂರ್ವಿಯ ದುಃಖವು ಬೆಂಕಿ ಬಿದ್ದ ಹೂತೋಟಕ್ಕೆ ಮಳೆ ಬಂದಂತೆ ತಂಪಾಯಿತು. ಮನಸ್ಸು ಹಗುರಾಯಿತು. ಎರಡೂ ಕೈಯಿಂದ ಕೆನ್ನೆ ಮೇಲೆ ಹರಿಯುತ್ತಿದ್ದ ಕಣ್ಣಿರನ್ನು ಒರೆಸುತ್ತಾ. ಮತ್ತೆಲ್ಲಿಗೆ ಸವಾರಿ? ಎಂಬ ಪ್ರಶ್ನೆಯಿಟ್ಟಳು. ಪರಮೇಶಿ ಪ್ರಸನ್ನತೆಯಿಂದ ನಾನು ಮೂರು ದಿನದ ಮಟ್ಟಿಗೆ ಪಾದ ಯಾತ್ರೆ ಹೊರಟ್ಟಿದ್ದೆನೆ. ಉಜಿರೆಯಿಂದ ಸಾಗಿ ದಿಡುಪೆಯ ಮೇಲಾಸಿ ಎಳನೀರು ದಾಟಿ ಹೊರನಾಡಿಗೆ ಹೋಗಿ ಬರುತ್ತೆನೆಂದ. ಇದನ್ನು ಕೇಳಿ ಪೂರ್ವಿ ಮತ್ತೆ ಹೌಹಾರಿದಳು. ‘ಅಯ್ಯೋ ನಡೆದೇ ಹೊಗ್ತಿರಾ..? ಅದೂ ಆನೆ ಹುಲಿಗಳು ತುಂಬಿರುವ ಆ ಕಾಡು ದಾರಿಯಲ್ಲಿ, ಅದೂ ಒಂಟಿಯಾಗಿ. ಬೇಡ..’ ಎಂದು ಆತನ ನಿರ್ಧಾರಕ್ಕೆ ಸ್ಟ್ರಾಂಗ್ ಒಬ್ಜೆಕ್ಷನ್ ಹಾಕಿದ್ಲು. ಮೊದಲೆ ಸುಪ್ರಿಂಕೋರ್ಟ್ ಲಾಯರ್ ಆಗುವ ಜ್ಞಾನ ಇಲ್ಲದಿದ್ರು ಮಾತಿನಲ್ಲಿ ಅವೆಲ್ಲವನ್ನು ಮರೆಮಾಡುವಷ್ಟು ನಾಲಿಗೆ ಹರಿತವಿದ್ದ ಪರಮೇಶಿ ಅದನ್ನು ಸರಸಗಟಾಗಿ ತಳ್ಳಿ ಹಾಕಿ ತನ್ನ ನಿರ್ಧಾರವನ್ನು ಸಮರ್ಥಿಸಿ ಹೆಂಡತಿಯ ಪರ್ಮಿಶನ್ ಪಡೆದುಕೊಂಡ.
ಇನ್ನೇನಿದ್ದರೂ ಹೊರಡೊದೊಂದೆ ಬಾಕಿ. ಖಡಕ್ ಚಾ ಕುಡಿದು ಬ್ಯಾಗೊಂದನ್ನು ಹೆಗಲೇರಿಸಿಕೊಂಡು, ಕೈಯಲ್ಲೊಂದು ನೆರವಿಗೆಂದು ಉರುಗೊಲನ್ನು ಹಿಡಿದು ಚಪ್ಪಲಿಯನ್ನೂ ಹಾಕದೆ ಹೊರಟ. ಹೊರಟು ನಿಂತ ಗಂಡನನ್ನು ನೋಡಿ ಪೂರ್ವಿ ಕಣ್ಣೀರಿಟ್ಟಳು. ಪರಮೇಶಿ ಸುಖವಾಗಿ ಹೋಗಿ ಬರುವುದಾಗಿ ಪೂರ್ವಿಯನ್ನು ಸಂತೈಸಿ ಮನೆಯಂಗಳದಿಂದ ಹೊರಟು ಮುಖ್ಯ ರಸ್ತೆಗೆ ಅಗಚುವ ದಾರಿಯನ್ನು ಹಿಡಿದ. ಆತ ಚಪ್ಪಲಿಯನ್ನು ಹಾಕುವುದು ಮದುವೆ ಮುಂಜಿಗೆ ಮಾತ್ರ. ವೃಥಾ ಚಪ್ಪಲಿಯನ್ನು ಸವೆಸುವುದೆಂದರೆ ಆತನಿಗೆ ಬಹಳ ವೇದನೆಯಾಗುತ್ತಿತ್ತು. ಅದಕ್ಕೆಂದೆ ಚಪ್ಪಲಿಯನ್ನು ದಾರದಲ್ಲಿ ಕಟ್ಟಿ ಮನೆಯ ಹಿಂಬದಿಯ ಮಾಡಿಗೆ ನೇತು ಹಾಕಿ ಗಲ್ಲು ಶಿಕ್ಷೆ ನೀಡಿದ್ದ.
ಪಾದ ಯಾತ್ರೆಗೆ ಚಾಲನೆ ಸಿಕ್ಕಿತ್ತು. ಈ ಜಿಪುಣಾಗ್ರೇಸರ ತಾನು ಬಸ್ಸಿನಲ್ಲಿ ಹೊದರೆ ನೂರರ ಮೂರು ನಾಲ್ಕು ನೋಟು ಸುಮ್ಮನೆ ಖಾಲಿಯಾಗುತ್ತದೆ ಎನ್ನುವ ಯೋಚನೆಯನ್ನು ಮಾಡಿಯೆ ಬೆವರಿದ್ದ. ಆದ್ದರಿಂದಲೆ ಈ ಪಾದ ಯಾತ್ರೆಯ ಭಕ್ತಿಯ ಮೊರೆ ಹೊಕ್ಕಿದ್ದು. ದಾರಿಯಲ್ಲಿ ಎಲ್ಲಿ ಆಯಾಸ ಪರಿಹರಿಕೊಳ್ಳಬೇಕು. ಎಲ್ಲಿ ನಿಂತು ಚಾ ಕಾಫಿ ಮುಗಿಸಬೇಕು. ಯಾವ ದೇವಸ್ಥಾನದಲ್ಲಿ ಮಧ್ಯಾಹ್ನದ ಊಟವಾಗಬೇಕು ಎನ್ನುವ ದೂರದ ಆಲೋಚನೆಯನ್ನು ಮಾಡುತ್ತಾ ಸಾಗುತ್ತಿದ್ದಂತೆ ರಾಮಮೂರ್ತಿ ಎದುರಾದ.
‘ಅರೇ ಪರಮೇಶಿ ಜೊಳಿಗೆ ಹಿಡಿದು ಎತ್ತಲಾಗ ಹೊರಟಿ ಮರಾಯಾ?’ ಅಂದ.
ಪರಮೇಶಿ ತನ್ನ ವೃತ್ತಾಂತವನ್ನು ಹಲ್ಲು ಕಿಸಸಿಯುತ್ತಾ, ಜೊಲ್ಲು ಸಿಂಪಡಿಸುತ್ತಾ ತಿಳಿಸಿದ. ಮೂರ್ತಿಯೂ ಅನ್ನಪೂರ್ಣೇಯ ಪರಮ ಭಕ್ತ. ಆತ ಅಲ್ಲಿಗೆ ಹೊಗುತ್ತಿರುವ ವಿಚಾರ ತಿಳಿದು ಕಿಸೆಗೆ ಕೈಯಾಡಿಸಿ ಧಾರಳವಾಗಿ ಇಪ್ಪತ್ತೂ ಮೂವತ್ತೂ ಕೊಟ್ಟು...
‘ಹುಂಡಿಗೆ ಹಾಕು, ಖರ್ಚು ಮಾಡಬೇಡ ಮಾರಾಯ, ದೆವರ ಕಾಣಿಕೆ ಪಾಪ ಬರುತ್ತದೆ’ ಎಂದ.
ಪರಮೇಶಿಯೂ ಇನ್ನೂ ಹೊರಟಿದ್ದನಷ್ಟೇ ಅದಾಗಲೇ ದೇವರ ಕೃಪೆಗೆ ಪಾತ್ರನಾಗಿದ್ದ. ಆಯಿತು ಮೂರ್ತಿಯಣ್ಣಾ ಎಂದು ಎರಡೂ ಕೈ ನೀಡಿ ಹಣ ಪಡೆದು ಬ್ಯಾಗಿಗಿಳಿಸಿದ. ಪ್ರಯಾಣ ಮುಂದುವರೆಯಿತು.
ಪರಮೇಶಿಯ ಪೇಚು ಆರಂಭವಾಗಿದ್ದು ದಿಡುಪೆಯ ಆ ದಟ್ಟ ಕಾಡುದಾರಿಯಲ್ಲಿ. ಅದಾಗಲೇ ದಾರಿ ಕ್ರಮಿಸಿದ ಆಯಾಸದಲ್ಲಿದ್ದ ಪರಮೇಶಿಗೆ ಡೊಳ್ಳು ಹೊಟ್ಟೆಯ ಭಾರದೊಂದಿಗೆ ಬೆನ್ನ ಹಿಂಬದಿಯ ಬ್ಯಾಗು ಬೇರೆ ಉಪದ್ರ ಕೊಡುತ್ತಿತ್ತು. ಮನೆಯಲ್ಲಿ ಸಣ್ಣ ಮಕ್ಕಳನ್ನು ಮುಂದೊಬ್ಬ ಹಿಂದೊಬ್ಬನನ್ನು ಕೊರಿಸಿಕೊಂಡು ಕೊಸುಮರಿ ಮಾಡಿದ ಪರಿಸ್ಥಿಯಾಯಿತು. ಮಧ್ಯಾಹ್ನದ ಸೂರ್ಯ ನತ್ತಿಯಿಂದ ಜಾರುತ್ತಿದ್ದ. ಪರಮೇಶಿ ಪರ್ವತವನ್ನು ಏರಲಿಕ್ಕೆ ಆರಂಭಿಸಿದ. ಆತ ಈ ಮೊದಲು ಎರಡು ಮೂರು ಬಾರಿ ಗೆಳೆಯರ ಜೊತೆ ಹೋಗಿದ್ದ. ಆದರೆ ಈ ಬಾರಿ ಒಬ್ಬನೆ ಹೊಗುವ ನಿರ್ಧಾರ ಯಾಕಾಗಿ ಮಾಡಿದನೊ ದೇವರೆ ಬಲ್ಲ. ಗುಂಪಿನಲ್ಲಿ ಜೋರು ಮಾತನಾಡುತ್ತಾ, ಬಾಯಿ ತುಂಬ ಪಾನ್ ಪರಾಕೊಸ, ಎಲೆ ಅಡಿಕೆಯೊ ತಿಂದು ಫುರ್ ಪಚಾಕ್ ಎಂದು ಉಗುಳುತ್ತ ನಡೆಯುತ್ತಿದ್ದರೆ ಎದುರಿದ್ದ ಬೆಟ್ಟ ಕಣಿವೆಗಳು, ಸುತ್ತ ಮುತ್ತ ಕೇಳುತ್ತಿದ್ದ ಪ್ರಾಣಿ ಪಕ್ಷಿಗಳ ಕೂಗು ಯಾವುದಕ್ಕೂ ಕಣ್ಣು, ಕಿವಿ ಗಮನ ನೀಡುತ್ತಿರಲಿಲ್ಲ, ಆದರೆ ಇಂದು ತರಗೆಲೆ ಬಿದ್ದರೂ ಮುಖ ಅಟೊಮ್ಯಾಟಿಕ್ ಆಗಿ ತಿರುಗಿ ನೋಡುತ್ತಿತ್ತು.
ಹೇಗೊ ಕಾಲೆಳೆÉದುಕೊಂಡು ಅರ್ಧ ದಾರಿ ಸವೆಸಿದ್ದ. ಅದಾಗಲೆ ಗಂಟೆ ನಾಲ್ಕರ ಗಡಿ ದಾಟಿ ಐದರ ಹೊಸ್ತಿಲಲ್ಲಿತ್ತು. ಅಲ್ಲೇ ಇದ್ದ ಬಂಡೆ ಮೇಲೆ ತುಸು ವಿರಮಿಸಿದ. ಬೆವರಿನಲ್ಲಿ ಮಿಂದಿದ್ದ, ಕಾಲುಗಳು ಸೊತಿದ್ದವು. ಎದ್ದು ನಿಂತ. ಊಟವಾದ ನಂತರ ಹೊಟ್ಟೆಯಮೇಲೆ ಕೈಯಾಡಿಸಿ, ಗುಢಾಣದಲ್ಲಿ ಸಂಪತ್ತು ತುಂಬಿಟ್ಟಂತೆ ಸಂತೋಷ ಪಡುತ್ತಿದ್ದ ಆತನಿಗೆ ಈಗ ಅದೇ ಡೊಳ್ಳುಹೊಟ್ಟೆ ಮಣಭಾರವಾಗತೊಡಗಿತು. ದೇಹ ಸ್ವಲ್ಪ ದಡೂತಿಯಾಯಿತು ಎಂದೆನಿಸಿತು. ಕಾಲುಗಳನ್ನು ನಿಧಾನವಾಗಿ ಎತ್ತಿಡುತ್ತ ಮುಂದೆ ಸಾಗಿದ. ಅದಾಗಲೇ ಜಿಂಕೆಯೊಂದು ಪೊದೆಯಿಂದ ಜಿಗಿದು ಓಡಿ ಹೊಯಿತು. ಈತ ಹುಲಿಯೇ ಮೇಲೆ ಹಾರಿತೆಂದು ಅಮ್ಮಾ ಎನ್ನುವುದರ ಜೊತೆಗೆ ಅನೈಚ್ಛಿಕವಾಗಿ ಉಚ್ಚೆ ಹರಿದು ಉಟ್ಟ ಪಂಚೆಯನ್ನು ತೊಯಿಸಿತು. ಛೇ.. ಜಿಂಕೆಗೆ ಹೆದರಿದೆನಲ್ಲ ಎಂದುಕೊಂಡು ಮಾನವ ಸಂಚಾರ ವಿರಳವಾಗಿದ್ದ ಆ ಕಾಡಲ್ಲಿ ಲುಂಗಿ ಬಿಚ್ಚಿ, ಹಿಂಡಿ, ಬಡಿದು ಮತ್ತೆ ಸುತ್ತಿಕೊಂಡು ಮನದಲ್ಲೇ ‘ಹಾಳು ಜಿಂಕೆ ಒದ್ದೆ ಮಾಡಿತು’ ಎಂದು ಗೊಣಗಿದ. ಹೆಜ್ಜೆಯನ್ನು ತುಸು ಬಿರುಸು ಮಾಡಿದ. ಅಷ್ಟರಲ್ಲೇ ಹಲಿಯ ಘರ್ಜನೆ ದೂರದಿಂದ ಕಿವಿಗೆ ಬಡಿಯಿತು. ಜಿಂಕೆ ಆ ಹುಲಿಗೆ ಹೆದರಿ ಓಡಿರಬೇಕು. ಹಾಳು ಜಿಂಕೆ ನಾನಿರುವತ್ತಲಿಂದ ಓಡಿತು, ಎಲ್ಲಾದರೂ ವಾಸನೆ ಹಿಡಿದು ನನ್ನತ್ತಲೆ ಬಂದರೆ ಎಂದುಕೊಂಡಾಗ ತಲೆ ಧೀಂ.. ಎಂದು ಸುತ್ತತೊಡಗಿತು. ಈಗ ಪಂಚೆಯನ್ನು ಮೇಲಕ್ಕೆತ್ತಿಕೊಂಡ ಪರಮೇಶಿ ಪಾದಯಾತ್ರೆಯಲ್ಲ ಮ್ಯಾರಥಾನ್ ಆರಂಭಿಸಿದ. ಬದುಕಿದರೆ ಬೇಡಿ ತಿಂದೆನು ಎಂದು ಓಡತೊಡಗಿದ. ಆತನ ಓಟ ನಡಿಗೆಗಿಂತ ತುಸು ವೇಗವಾಗಿತ್ತಷ್ಟೇ. ಆದರೆ ಆತನ ಲೆಕ್ಕದಲ್ಲಿ ಒಡುತ್ತಲಿದ್ದ.
ಅಂತೂ ಜೀವ ಹಿಡಿದು ಕಾಡು ದಾರಿ ಮುಗಿಸಿದ ಪರಮೆಶಿಗೆ ಎಳನೀರು ಮುಟ್ಟುವ ಹೊತ್ತಿಗೆ ಜೀವ ಬಾಯಿಗೆ ಬಂದಿತ್ತು. ಹೆದರಿ ಹಿಪ್ಪೆಯಾಗಿದ್ದ ಆತನಿಗೆ ಜ್ವರ ಸುಡಲಾರಂಭಿಸಿತು. ಎಳನೀರಿನಲ್ಲಿದ್ದ ಸ್ನೇಹಿತ ಬಾಲುವಿನ ಮನೆಗೆ ಹೊಗಿ ತಿಟ್ಟೆಯಲ್ಲಿ ಕಾಲು ಚಾಚಿ ಮಲಗಿದವಗೆ ಅಲ್ಲೇ ಮೂರ್ಛೆ ತಪ್ಪಿತು. ಬಾಲುವಿಗೆ ತಿಂಗಳ ಹಿಂದೆ ಮದುವೆಯಾಗಿತ್ತು. ಸಣಕಲು ಕಡ್ಡಿಯ ಹಾಗಿದ್ದ ಆತನ ಹೆಂಡತಿ ತಿಟ್ಟೆಯಲ್ಲಿ ಮಲಗಿದ್ದ ಕುಂಭಕರ್ಣನನ್ನು ನೋಡಿ ಮೂರ್ಛೆ ತಪ್ಪದೆ ಇದ್ದಿದ್ದು ಪುಣ್ಯ. ಆತನನ್ನು ನೋಡಿ ಹೌಹಾರಿದವಳೆ ‘ರೀ.. ಇಲ್ಲೊಂದು ಬಿದ್ದ್‍ಕೊಂಡಿದೆ’ ಅಂದ್ಲು. ಮದುವೆಯ ಹೊಸದರಲ್ಲಿ ಅಲ್ಲವೇ ಆತನಿಗೆ ಅದು ‘ನಾನು ಬಿದ್ದು ಬಿಟ್ಟೆ’ ಎಂದು ಕೇಳಿತು. ಬಂದೆ ತಡಿ ಅನ್ನುತ್ತಾ, ಹಿಡಿದಿದ್ದ ಕೆಲಸವನ್ನು ಬಿಟ್ಟು ಹೆಂಡತಿಯ ಮೊರೆ ಕೇಳಿ ಓಡಿ ಬಂದ. ಬಂದು ತಿಟ್ಟೆಯಲ್ಲಿ ಅಂಗಾತ ಮಲಗಿದ್ದ ಪರಮೇಶಿಯನ್ನು ನೋಡಿ ಆತನಿಗೂ ದಿಗಿಲಾಯಿತು. ಮೈ ಬೇರೆ ಸುಡು ಬೆಂಕಿಯಾಗಿತ್ತು. ನೀರು ಚಿಮುಕಿಸಿ, ಗಾಳಿ ಬೀಸಿದಾಗ ಹೇಗೂ ಪರಮೇಶಿ ಕಣ್ಣು ಬಿಟ್ಟ. ಬಿಸಿ ಬಿಸಿ ಕಾಫಿ ಕೊಟ್ಟಾಗ ಸ್ವಲ್ಪ ಚೇತರಿಸಿಕೊಂಡ. ಆತನನ್ನು ಸೀದಾ ಕಳಸದ ಆಸ್ಪತ್ರೆಗೆ ದಿನದ ಮಟ್ಟಿಗೆ ಇರು ಎಂದು, ತನ್ನ ರೀಕ್ಷಾದಲ್ಲಿ ಕೂರಿಸಿ ಹೊರಟಾಗ ಪರಮೇಶಿಗೆ ದಿಗಿಲಾಯಿತು. ಮನೆಯಿಂದ ಹೊರಟಾಗ ದೇವರಿಗೆ, ಖರ್ಚಿಗೆ ಎಂದು ಒಲ್ಲದ ಮನಸ್ಸಿಂದ ಏಳುನೂರು ರೂಪಾಯಿ ತಂದಿದ್ದ. ಈ ಹಾಳು ಆಸ್ಪತ್ರೆ ಎಲ್ಲಾ ನುಂಗಿ ನೀರು ಕುಡಿಯತ್ತೆ ಎಂದುಕೊಂಡು
‘ಏ ಬಾಲೂ ಆಸ್ಪತ್ರೆಗೆ ಯಾಕೆ? ಮೆಡಿಕಲ್‍ನಿಂದ್ಲೆ ಎರಡು ಗುಳಿಗೆ ತಗೊಂಡ್ರೆ ಜ್ವರ ಮಂಗಮಾಯ ಅಲ್ವೆ’ ಎಂದು ರಾಗ ಎಳೆದ.
ಮೊದಲೆ ಈತನ ಧಾರಳ ಬುದ್ದಿಯನ್ನು ತಿಳಿದಿದ್ದ ಬಾಲೂ ಮರು ಮಾತಾಡದೆ ಅಸ್ತು ಎಂದು ಎರಡು ಮಾತ್ರೆಯೊಂದಿಗೆ ಮನೆಗೆ ಕರೆತಂದ.
ಈ ದಿನ ಪರಮೇಶಿ ಗಡದ್ದಾಗಿ ಉಂಡು ಮಲಗಿದ. ಜಿಂಕೆಯಿಂದಾದ ಪ್ರಮಾದವಾಗಲಿ, ಹೆದರಿ ಓಡೊಡಿ ಬಂದ ವಿಚಾರವಾಗಲಿ ತಪ್ಪಿಯೂ ಹೇಳಲಿಲ್ಲ. ಮರು ದಿನ ಬೆಳಗ್ಗೆ ಬೇಗ ಹೊರಟು ನಡೆದೆ ಹೊರನಾಡು ತಲುಪಿದ. ದೇವಿಗೆ ನಮಸ್ಕರಿಸಿ, ಪೂಜೆ ಪುನಸ್ಕಾರಗಳನ್ನು ಮುಗಿಸಿ, ಆ ದಿನ ದೇವಿ ಸನ್ನಿದಿಯಲ್ಲೇ ಉಳಿದ. ಮರುದಿನ ದೇವಿಯ ಪೂರ್ಣ ಕೃಪಕಟಾಕ್ಷವನ್ನು ಪಡೆದವನಂತೆ ಹೊರಟು ನಿಂತ.
ಅಲ್ಲಿಂದ ಹೊರಡುವಾಗ ಪಾದÀಯಾತ್ರೆಯ ವಿಚಾರವನ್ನು ದೇವಿಯ ಪಾದದಲ್ಲೇ ತೊರೆದಿದ್ದ. ಜಿಂಕೆಯನ್ನು ಹುಲಿಯೆಂದು ಭಾವಿಸುವುದು, ಗಳಿಗೆಗೊಮ್ಮೆ ಪಂಚೆ ಹಿಂಡುವುದು, ಈ ಕ್ಯಾಮೆ ಬೇಡವೇ ಬೇಡ ಎಂದು ಬಸ್ಸು ಹಿಡಿದು ಮನೆಗೆ ಮುಟ್ಟಿದ.
Super....
ಪ್ರತ್ಯುತ್ತರಅಳಿಸಿ