ಬಹುಮುಖಿ ಪ್ರತಿಭೆ ಕೆ.ಪಿ ತೇಜಸ್ವಿಯವರ ಬದುಕು ಬರಹ
ಕನ್ನಡದ ದೈತ್ಯ ಪ್ರತಿಭೆ ಕುವೆಂಪು ಅವರ ಮುಂದುವರೆದ ಭಾಗವಾಗಿ ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿದವರು ಪೂರ್ಣಚಂದ್ರ ತೇಜಸ್ವಿಯವರು. ಕುವೆಂಪು ಅವರ ಮಗನಾದರೂ ಬೆಳೆದದ್ದು ಮಾತ್ರ ಅಪ್ಪಟ ಸ್ವತಂತ್ರ ಪ್ರತಿಭಯಾಗಿಯೆ. ಈ ಕಾರಣಕ್ಕಾಗಿಯೊ ಏನೊ ಕುವೆಂಪು ಕಾಡು ಬಿಟ್ಟು ನಾಡು ಸೇರಿದರು, ತೇಜಸ್ವಿ ನಾಡಿನ ಗುಂಗು ತೊರೆದು ಪ್ರಕೃತಿಯಲ್ಲಿ ಲೀನವಾದರು. ಕೆ.ಪಿ ತೇಜಸ್ವಿಯವರ ಬದುಕು ಬಹು ಆಯಾಮದ ವರ್ಣರಂಜಿತ ಬದುಕು. ತಂದೆಯೂ ಮಗನನ್ನು ಯಾವ ವಿಚಾರದಲ್ಲೂ ನಿರ್ಬಂಧಿಸದೆ ಸ್ವತಂತ್ರ ಪ್ರವೃತ್ತಿಯನ್ನು ಮಗನಲ್ಲಿ ಬಿತ್ತಿದರು. ಮಗನ ಪ್ರತಿಭೆಗೆ ನೀರೆರೆದು ಪೋಷಿಸಿದರು. ಅಂತೆಯೇ ಮಗನೂ ತಂದೆಯ ನಂಬಕೆಯನ್ನು ಹುಸಿಗೊಳಿಸದೆ ಕನ್ನಡ ಸಾಹಿತ್ಯ ಲೋಕದಲ್ಲಿ ವಿರಾಜಿಸಿದರು. ಆದರೆ ಅವರ ಅಕಾಲಿಕ ಮರಣ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಯಿತು. ನಷ್ಟಮಾತ್ರವಲ್ಲ ಭವಿಷ್ಯದಲ್ಲಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಬರುವ ಅವಕಾಶವೂ ತಪ್ಪಿತು ಎಂಬ ನಿರಾಶೆ ಸಾಹಿತ್ಯ ವಲಯದಲ್ಲಿ ಕೇಳಿಬಂತು.
ನಾನು ಇತ್ತೀಚಿಗೆ ತೇಜಸ್ವಿಯವರ ಕಾದಂಬರಿಗಳನ್ನೆಲ್ಲ ಓದಿ ಮುಗಿಸಿದೆ. ಅವರ ಕಥೆಗಳನ್ನು ‘ಅಬಚೂರಿನ ಪೋಸ್ಟಾಫಿಸು’ ಪುಸ್ತಕದಲ್ಲಿ ಓದಿದ್ದೆ, ಅಲ್ಲದೆ ಬಿಡಿ ಬಿಡಿಯಾಗಿಯೂ ಓದಿದ್ದೇನೆ. ಪ್ರತಿಯೊಂದು ಕಥೆ. ಕಾದಂಬರಿಯಲ್ಲೂ ಪ್ರಕೃತಿ ತೇಜಸ್ವಿಗೆ ಬೆರಗಾಗಿ ಕಂಡಿದೆ. ಓದುಗನಿಗೂ ಈ ಅನುಭವವಾಗುತ್ತದೆ ಮತ್ತು ಅವರ ಬರಹಗಳಿಗೂ ಆ ಶಕ್ತಿಯಿದೆ. “ಫೋಟೋಗ್ರಫಿ ನನ್ನ ಬರವಣಿಗಗೆ ಹಲವು ಅಸಾಧಾರಣ ಶಿಸ್ತು ಸಂಯಮಗಳನ್ನು ಕಲಿಸಿತೆಂದು ಅನ್ನಿಸುತ್ತದೆ”1 ಎಂದು ತೇಜಸ್ವಿಯೇ ತಾನು ಪ್ರಕೃತಿಯಿಂದ ಪಡೆದ ಸ್ಫೂರ್ತಿಯನ್ನು ನೆನಪಿಸಿಕೊಳ್ಳುತ್ತಾರೆ. ಸಾಹಿತಿಯ ಮಗನಾಗಿ, ಅಪ್ಪಟ ಸಾಹಿತ್ಯದ ವಿದ್ಯಾರ್ಥಿಯಾಗಿ ಅವರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಮಾತ್ರ ಬೆರಗು ಮೂಡಿಸುವಂತದ್ದು. ಫೋಟೋಗ್ರಫಿ, ಫಿಶರಿಂಗ್, ಕೃಷಿ, ರೈತ ಚಳುವಳಿ, ಮುಖಪುಟ ವಿನ್ಯಾಸ, ತಂತ್ರಜ್ಞಾನ ಅಭಿವೃದ್ಧಿ, ಸಾಹಿತ್ಯ ಕೃಷಿ ಅಬ್ಬಾ ಎಷ್ಟೇಲ್ಲಾ ಕ್ಷೇತ್ರಗಳು. ಬಹುಶಃ ಕಾರಂತರ ನಂತರದಲ್ಲಿ ಸಾಹಿತ್ಯದ ಜೊತೆಗೆ ಇತರ ಕ್ಷೇತ್ರಗಳಲ್ಲಿ ಜ್ಞಾನವನ್ನು ಸಂಪಾದಿಸಿದ್ದು ತೇಜಸ್ವಿಯರೊಬ್ಬರೆ ಎಂದೆನಿಸುತ್ತದೆ. ಇದೆ ಕಾರಣಕ್ಕೆ ಇರಬೇಕು ತೇಜಸ್ವಿಯವರು ‘ಅಬಚೂರಿನ ಪೋಸ್ಟಾಫಿಸು’ ಕೃತಿಯ ಮುನ್ನುಡಿಯಾದ ಹೊಸ ದಿಗಂತದೆಡೆಗೆ ಲೇಖನದಲ್ಲಿ “ಲೋಹಿಯಾರವರ ತತ್ವ ಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನಲ್ಲಿ ಪ್ರಯೋಗಶೀಲತೆ ಈ ಮೂರು ನನ್ನ ಈಚಿನ ಸಾಹಿತ್ಯ ರಚನನೆಯ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿರುವಂಥವು”2 ಎನ್ನುತ್ತಾರೆÉ. ಹೀಗೆ ಬಹುಮುಖಿ ಪ್ರತಿಭೆಯಾದ ತೇಜಸ್ವಿಯವರು ಕನ್ನಡದ ಒಬ್ಬ ಅನನ್ಯ ಸಾಹಿತಿಯಾಗಿ ಮುಖ್ಯರಾಗುತ್ತಾರೆ.
ನಾನು ಇಷ್ಟೇಲ್ಲ ಪೀಠಿಕೆಯನ್ನು ಯಾಕೆ ಹಾಕಿದೆ. ಈ ಮೇಲಿನ ಮಾತುಗಳೆಲ್ಲ ಯಾಕೆ ಬಂದವು ಎಂದರೆ ತೇಜಸ್ವಿಯವರ ಬಗ್ಗೆ ಅವರ ಮಡದಿ ಶ್ರಿಮತಿ ರಾಜೇಶ್ವರಿ ತೇಜಸ್ವಿಯವರು ಬರೆದ ‘ನನ್ನ ತೇಜಸ್ವಿ’ ಪುಸ್ತಕದ ಬಗ್ಗೆ ನಿಮ್ಮ ಜೊತೆ ವಿಚಾರ ವಿನಿಮಯ ಮಾಡುವ ಎಂದು. ಪ್ರೇಯಸಿಯಾಗಿ, ಮಡದಿಯಾಗಿ, ಜೀವನ ಸಂಗಾತಿಯಾಗಿ ತೇಜಸ್ವಿಯವರನ್ನು ಅರಿತ ರಾಜೇಶ್ವರಿ ತೇಜಸ್ವಿ ಅವರು ಲೇಖಕಿಯಾಗಿಯೂ ನಮಗೆ ಮುಖ್ಯರಾಗುತ್ತಾರೆ. ಜೊತೆಗೆ ಅವರೇ ಬರೆದಿರುವ ಈ ಪುಸ್ತಕವೂ ಬಹಳ ಮುಖ್ಯವಾಗುತ್ತದೆ. ಈ ಕಾರಣಕ್ಕಾಗಿಯೇ ಓದಿದ್ದನ್ನು ನಿಮ್ಮ ಜೊತೆ ಹಂಚಿಕೊಂಡರೆ ನನ್ನ ಅಟ್ಟದ(ತಲೆಯ) ಸಾಮಾನೂ ಭದ್ರ ನಿಮಗೂ ಕೊಂಚ ಅದರ ಉಪಯೋಗವಾದಿತು ಎನ್ನು ಇರಾದೆ ಅಷ್ಟೆ.
ಈ ಪುಸ್ತಕದ ಪ್ರಾಥಮಿಕ ಮಾಹಿತಿಯೆಂದರೆ. 22ಸೂಚಿಗಳನ್ನೋಳಗೊಂಡು ಒಟ್ಟು 561ಪುಟಗಳಿವೆ, ಅಕ್ಷರ ಪ್ರಕಾಶನದವರು ಪ್ರಕಟಿಸಿದ ಈ ಪುಸ್ತಕ ನೋಡಲೂ ಆಕರ್ಷಕವಾಗಿದೆ, ಒಡಲೂ ಮೌಲಿಕ ಬರಹದಿಂದ ಕೂಡಿ ಕನ್ನಡದ ಅಮೂಲ್ಯ ಕೃತಿಯಾಗಿದೆ.
ವ್ಯಕ್ತಿಯೊಬ್ಬನ ಅಂತರಂಗವನ್ನು ಅರಿಯುವುದು ಬಹಳ ಕಷ್ಟ. ಅದರಲ್ಲೂ ಅಂತರ್ಮುಖಿಗಳ ಬದುಕಂತೂ ಕಗ್ಗಂಟೆ ಸರಿ. ಆದರೆ ತೇಜಸ್ವಿಯವರು ತೆರೆದ ಮನಸ್ಸಿನ ಸಾಧು ಮನುಷ್ಯ. ಈ ವಿಚಾರವನ್ನು ನಾನು ನನ್ನ ಕಿಸೆಯಿಂದ ಹೇಳುತ್ತಿಲ್ಲ. ಈ ವಿಚಾರ ತೇಜಸ್ವಿಯವರು ಕುವೆಂಪು ಅವರಿಗೆ ಬರೆದ ಪತ್ರಗಳಲ್ಲಿ ಮತ್ತು ರಾಜೇಶ್ವರಿ ತೇಜಸ್ವಿಯವರಿಗೆ ಬರೆದ ಪತ್ರಗಳಲ್ಲಿ ವ್ಯಕ್ತವಾಗುತ್ತದೆ. ಅಲ್ಲದೆ ಅವರು ತನ್ನ ಜೀವಿತಾವಾಧಿಯಲ್ಲಿ ಹಾಗೆ ಬದುಕಿದರೂ ಕೂಡಾ. ಪ್ರತಿಯೊಂದು ಕೃತಿಯೂ ಅನುಭವದ ಮೂಸೆಯಲ್ಲಿಯೆ ಅದ್ಭುತವಾಗಿ ಮೂಡಿಬಂದವು. ಅವರ ಬರವಣಿಗೆ ಓದುಗರ ಮೇಲೆ ಬೀರಿದ ಪರಿಣಾಮ ಎಷ್ಟೆಂದರೆ ‘ನನ್ನ ತೇಜಸ್ವಿ’ ಪುಸ್ತಕದಲ್ಲಿ ಬರುವ ಒಂದು ಘಟನೆ ನನಗೆ ಬೆರಗು ಮೂಡಿಸಿತು. ಜಪಾನಿ ಭಾಷೆಗೆ ಅನುವಾದಗೊಂಡ ಅವರ ‘ಕರ್ವಾಲೂ’ ಕೃತಿಯನ್ನು ಓದಿ ಒಬ್ಬ ಮಹಿಳೆ ಭಾರತಕ್ಕೆ ಬಂದ ಸಂದರ್ಭದಲ್ಲಿ ತೇಜಸ್ವಿಯವರನ್ನು ನೋಡುವ ಸಲುವಾಗಿ ಮೂಡಿಗೆರೆಗೆ ಬಂದು ಹೋಗಿದ್ದರು. ಅನುವಾದಗೊಂಡ ಕೃತಿಗೆ ಜಪಾನಿನಲ್ಲೂ ಪ್ರಶಸ್ತಿ ಬಂದಿದೆಯಂತೆ. ತೇಜಸ್ವಿಯವರು ಕಾಡಿನೊಳಗಿದ್ದುಕೊಂಡು ಪ್ರಪಂಚವನ್ನು ಅರಿಯುತ್ತಿದ್ದರು. ಸಾಯುವ ಕಡೇ ಕಾಲದವರೆಗೂ ಕಲಿಯುವ ಆಸಕ್ತಿಯುಳ್ಳ ವಿದ್ಯಾರ್ಥಿಯಂತೆ ಬದುಕಿದರು ಎನ್ನುವುದಕ್ಕೆ ಈ ಕೃತಿಯೇ ಸಾಕ್ಷಿ.
ನನಗೆ ಈ ಕೃತಿ ರಾಜೇಶ್ವರಿ ತೇಜಸ್ವಿಯವರು ಬರೆದ ಮೊದಲ ಕೃತಿಯೆಂಬ ಭಾವನೆಯನ್ನು ಮೂಡಿಸಲೇ ಇಲ್ಲ. ಬಿಡಿ ಬಿಡಿಯಾದ ನೆನಪುಗಳನ್ನು ಪೋಣಿಸಿದ ಅವರ ಬರಹ ಕನ್ನಡದ ಒಬ್ಬ ಶ್ರೇಷ್ಠ ಸಾಹಿತಿಯ ಬದುಕನ್ನು ಕಟ್ಟಿಕೊಡುವಲ್ಲಿ ತನ್ನ ಸಾರ್ಥಕತೆಯನ್ನು ಕಂಡಿದೆ. ಈ ಕೃತಿ ತೇಜಸ್ವಿಯವರ ವೈಯುಕ್ತಿಕ ಬದುಕಿನ ಅನಾವರಣ ಮಾತ್ರವಲ್ಲ, ಇಲ್ಲಿ ಕುವೆಂಪು ಅವರ ಬದುಕು ಮತ್ತು ಕುಟುಂಬದ ಚಿತ್ರಣವಿದೆ. ರಾಜೇಶ್ವರಿ ಮತ್ತು ತೇಜಸ್ವಿಯವರ ಸಂಬಂಧದ ನೆಲೆಗಳಿವೆ. ಸೊಸೆ ಮತ್ತು ಕುವೆಂಪು ನಡುವಿನ ಸಂಬಂಧಗಳ ವಿವರವಿದೆ. ಸಾಹಿತಿ ಮತ್ತು ಸಮಾಜದ ವಿವಿಧ ಮಜಲುಗಳಿವೆ. ಬದುಕಿನ ಹೋರಾಟದ ಹಾದಿಗಳಿವೆ. ಪ್ರಕೃತಿ ಮತ್ತು ಮನುಷ್ಯನ ಸಂಬಂಧದ ಹೋರಣವಿದೆ. ಒಟ್ಟು ಕೃತಿ ತೇಜಸ್ವಿಯವರನ್ನು ಮುಖ್ಯವಾಗಿಟ್ಟುಕೊಂಡು ಅನೇಕ ವಿಚಾರಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಹಾಗಾಗಿ ಈ ಕೃತಿಗೆ ಸಹಜವಾಗಿಯೇ ಮೌಲ್ಯ ಒದಗಿದೆ.
ಕನ್ನಡದ ಶ್ರೇಷ್ಠ ಕವಿಯೊಬ್ಬರ ಮಗನಾಗಿ ಇಡೀ ಕನ್ನಡಿಗರಿಗೆ ತೇಜಸ್ವಿಯವರ ಮೇಲೆ ಅನೇಕ ನಿರೀಕ್ಷೆಗಳಿದ್ದವು. ಆದರೆ ತೇಜಸ್ವಿ ಅದನ್ನು ಸಹಜವಾಗಿ ಸ್ವೀಕರಿಸಿದ್ದನ್ನು ಕಾಣಬಹುದು. ಕುವೆಂಪಾದರೂ ಕೊಂಚವೂ ಪರಿಧಿಯನ್ನು ಎಳೆದು ನನ್ನ ಮಗ ಹೀಗಿರಬೇಕು, ಹಾಗಿರಬೇಕು ಬಯಸಿದವರೂ ಅಲ್ಲ. ಕಾಡಿನಲ್ಲಿ ಮರವೊಂದು ತನ್ನ ಬೀಜವನ್ನು ಭೂಮಿಗೆ ಒಗೆದು ಸ್ವತಂತ್ರವಾಗಿ ಬದುಕಲು ಬಿಟ್ಟಂತೆ ತೇಜಸ್ವಿಯವರಿಗೆ ಸ್ವಾತಂತ್ರ್ಯವನ್ನು ನೀಡಿದ್ದರು. ಈ ಎಲ್ಲಾ ಅಂಶಗಳೇ ತೇಜಸ್ವಿಯವರನ್ನು ನಾಡು ಬಿಟ್ಟು ತನ್ನ ಆಸಕ್ತಿಯ, ಆನಂದದ ಬದುಕನ್ನು ಅರ್ಥಪೂರ್ಣವಾಗಿಸಬಲ್ಲ ಕಾಡಿನ ಬದುಕಿಗೆ ಕರೆತಂದಿತು.
‘ನನ್ನ ತೇಜಸ್ವಿ’ ಪುಸ್ತಕ ರಾಜೇಶ್ವರಿ ತೇಜಸ್ವಿ ಅವರು ಬರೆದಿರುವ ಕೆ.ಪಿ ತೇಜಸ್ವಿಯವರ ಜೀವನ ಚರಿತ್ರೆಯೆಂದೆ ಹೇಳಬಹುದು. ಇಲ್ಲಿ ತೇಜಸ್ವಿಯವರ ಪ್ರಯೋಗಗಳು, ಅನ್ವೇಷಣೆಗಳು, ನಿಲುವುಗಳು, ತತ್ವಗಳು, ಧೋರಣೆಗಳು ಬಿಡಿ ಬಿಡಿಯಾದ ಮಾತುಗಳ ಮೂಲಕ ಅನಾವರಣಗೊಳ್ಳುತ್ತಾ ಹೋಗುತ್ತದೆ. ಕುವೆಂಪು ಹೇಳುವ ಮಾತು “ನೀವು ಲೋಕವನ್ನಾಗಲಿ ಪುರೋಹಿತಶಾಹಿಯನ್ನಾಗಲಿ ಪ್ರತಿಭಟಿಸುವ ಬದಲಾಯಿಸುವ ಅಗತ್ಯ ಖಂಡಿತಾ ಇಲ್ಲ. ನೀವು ಪ್ರಮಾಣಿಕರಾಗಿದ್ದರೆ ನಾನು ಹೇಳುವ ಒಂದು ಸಣ್ಣ ಸುಧಾರಣೆ ನಿಮ್ಮ ಜೀವನದಲ್ಲಿ ಮಾಡಿಕೊಳ್ಳಿ. ನೀವು ವರದಕ್ಷಿಣೆ ತಗೊಳ್ಳದೆ, ಶಾಸ್ತ್ರಾಚಾರಗಳಾವುದನ್ನು ಮಾಡದೆ, ನಿಮ್ಮ ಅಂತಸ್ತಿನ ಪ್ರದರ್ಶನ ಮಾಡಲು ದುಂದು ಮಾಡದೆ ಸರಳವಾಗಿ ಮದುವೆ ಮಾಡಿಕೊಳ್ಳಿ. ಇದ್ಯಾವ ಮಹಾಕ್ರಾಂತಿ ಎಂದು ನಿಮಗನಿಸಬಹುದು. ನೀವು ನಂಬಿದ ಮೌಲ್ಯಗಳ ಆದರ್ಶಗಳ ಪರವಾಗಿ ನಿಂತು ಗೊಡ್ಡು ಸಂಪ್ರದಾಯಗಳನ್ನು ಎದುರಿಸಿ ಅವುಗಳಿಗಾಗಿ ಆ ಅದ್ಭುತ ಅನುಭವ ಆನಂದ ಎಂತಹುದೆಂದು ನಿಮಗೆ ಗೊತ್ತಾಗುತ್ತದೆ. ಭಾರತ ನಿಮ್ಮ ಕಣ್ಣೆದುರೆ ಬದಲಾಗುವುದನ್ನು ಕಾಣುತ್ತೀರಿ”3 ರಾಜೇಶÀ್ವರಿಯವರು ದಾಖಲಿಸಿದ ವಿವರವಾದ ನೆನಪುಗಳ ಪ್ರಕಾರ ತೇಜಸ್ವಿಯವರು ಈ ಮಾತನ್ನು ವೇದ ವಾಕ್ಯದಂತೆ ಸ್ವೀಕರಿಸಿದ್ದರು ಎಂದೆನಿಸುತ್ತದೆ. ಇಡೀ ಜೀವನದಲ್ಲಿ ತೇಜಸ್ವಿಯವರು ದೊಡ್ಡ ಕ್ರಾಂತಿಯನ್ನೇನೂ ಹುಟ್ಟುಹಾಕಲಿಲ್ಲ. ಬದಲಾಗಿ ತನ್ನದೆ ಆದ ಪುಟ್ಟ ಹೆಜ್ಜೆಗಳನ್ನು ದಿಟ್ಟತನದಿಂದ ಮುಂದಿಟ್ಟರು. ಅದು ಕಾಫಿಯ ಮಾರಟದ ವಿಚಾರವಿರಬಹುದು, ಮಂತ್ರ ಮಾಂಗಲ್ಯ, ಮುದ್ರಣ, ಪರಿಸರ ಹೋರಾಟ ಮುಂತಾದವುಗಳೆಲ್ಲ ಮುಂದೆÉ ಜನರಿಗೆ ಅನುಕೂಲವನ್ನು ಕಲ್ಪಿಸಿದವು. ಇಲ್ಲಿ ಕುವೆಂಪುರವರು ಸಣ್ಣ ವಿಚಾರವೊಂದಕ್ಕೂ ಬದಲಾವಣೆಯನ್ನು ತರುವ ತಾಕತ್ತಿದೆ ಎನ್ನುದನ್ನು ಗುರುತಿಸಿದರೆ ತೇಜಸ್ವಿಯವರು ಅದನ್ನು ಸಾಧಿಸಿ ತೋರಿಸಿದರು. ಇದು ಗುರುಶಿಷ್ಯರಿಬ್ಬರ ನಡುವಿನ ಅಪ್ಯಾಯಮಾನವಾದ ಸಂಬಂಧಂತೆ ನಮಗೆ ಗೋಚರಿಸುತ್ತದೆ. ಈ ಪುಸ್ತಕದಲ್ಲಿ ತೇಜಸ್ವಿಯವರ ಆದರ್ಶಗಳ ಜೊತೆಗೆ ಅವರ ಸಿಟ್ಟು, ಸೆಡವುಗಳು, ಆಲಕ್ಷ್ಯತನ ಇವುಗಳೂ ದಾಖಲಾಗಿವೆ ಇದು ವ್ಯಕ್ತಿಯೊಬ್ಬ ಎಲ್ಲದರಲ್ಲೂ ಪರಿಪೂರ್ಣನಾಗಿರಲು ಸಾಧ್ಯವಿಲ್ಲ ಎಂಬುದನ್ನು ತಿಳಿಸುತ್ತದೆ. ಒಬ್ಬ ವ್ಯಕ್ತಿಯನ್ನು ಅವನಲ್ಲಿದ್ದ ನ್ಯೂನತೆಗಳನ್ನು, ಕೊರತೆಗಳನ್ನು ಮರೆಮಾಚಿ ವೈಭವೀಕರಿಸುವುದು ಒಂದು ರೋಗ ಮತ್ತು ಅವಲಕ್ಷಣವೇ ಸರಿ.
ತೇಜಸ್ವಿಯವರ ಹವ್ಯಾಸಗಳೇ ಹೆಚ್ಚಾಗಿ ಬರಹದಲ್ಲಿ ಅಚ್ಚೊತ್ತಿದೆ ಎನ್ನುವುದು ನನಗನ್ನಿಸಿದ್ದು ‘ನನ್ನ ತೇಜಸ್ವಿ’ ಪುಸ್ತಕ ಓದಿದ ನಂತರದಲ್ಲಿ. ಯಾಕೆಂದರೆ ತೇಜಸ್ವಿಯವರು ಕಥೆ, ಕಾದಂಬರಿಗಳಲ್ಲಿ ಪ್ರಕೃತಿಯ ಕುರಿತಾದ ಮಾಹಿತಿಯನ್ನು ಸಮಗ್ರವಾಗಿ ಕಥೆಯ ಜೊತೆ ಜೊತೆಗೆ ನೀಡುತ್ತಾ ಹೋಗುತ್ತಾರೆ. ಕಥೆ, ಕಾದಂಬರಿಯಲ್ಲಿ ಬರುವ ಹೆಸರು, ಸ್ಥಳಗಳೆ ಭವಿಷ್ಯದ ಪರಿಣಾಮವನ್ನು ಸೂಚಿಸುತ್ತವೆ. ಕೆಸರೂರು, ಪಾರ್ಥೆನಿಯಂ, ಕಿವಿ, ಬಿರಿಯಾನಿ ಕರಿಯಪ್ಪ, ಕರ್ವಾಲೊ ಈ ಎಲ್ಲಾ ಹೆಸರುಗಳಲ್ಲದೆ ಇನ್ನೂ ಅನೇಕವಿವೆ. ಇವೆಲ್ಲ ಕಥೆ, ಕಾದಂಬರಿಯಲ್ಲಿ ಪಾತ್ರಗಳಿಗೊಂದು ಹೆಸರು ಬೇಕೆಂದೊ, ಅಥವಾ ಕೃತಿಗೊಂದು ಶಿರ್ಷಿಕೆ ಬೇಕೆಂದೊ ಆರಿಸಿಕೊಂಡ ಹೆಸರುಗಳಲ್ಲ. ಇವುಗಳ ಹಿಂದೆ ತೇಜಸ್ವಿಯವರಿಗೊಂದು ಸಾವಯವ ಸಂಬಂಧವಿದೆ, ತತ್ವವಿದೆ. ಆ ಹೆಸರುಗಳಲ್ಲೆ ವರ್ತಮಾನ, ಭವಿಷ್ಯದ ಕೆಲವು ಒಳನೋಟಗಳಿವೆ. ಬಿರಿಯಾನಿ ಕರಿಯಪ್ಪ ತೇಜಸ್ವಿಯವರ ಮದುವೆಯಲ್ಲಿ ಮಾಂಸದೂಟ ತಯಾರಿಸಿದ ವ್ಯಕ್ತಿ. ಆತನೆ ಕರ್ವಾಲೊ ಕಾದಂಬರಿಯಲ್ಲಿ ಪಾತ್ರವಾಗುತ್ತಾನೆ. ಕಿವಿ ಎನ್ನುವ ನಾಯಿ ತೇಜಸ್ವಿಯವರು ಸಾಕಿದ ಮೊದಲ ನಾಯಿ. ಚಿತ್ರಕೂಟದಲ್ಲಿ ಅವರ ಜೊತೆ ಬೇಟೆಯಾಡುತ್ತಿದ್ದ ಚಾಣಕ್ಷ ಬೇಟೆ ನಾಯಿಯದು. ಕೆಸರೂರು ‘ಚಿದಂಬರ ರಹಸ್ಯ’ ಕಾದಂಬರಿಯಲ್ಲಿ ಬರುವ ಊರು. ಈ ಹೆಸರು ಇಡೀ ಊರಿನ ಮಾನಸಿಕತೆಯನ್ನು ಸೂಚಿಸುತ್ತದೆ. ಮುಂದೆ ಆಗಲಿರುವ ಪರಿಣಾಮವನ್ನೂ ವರ್ತಮಾನದ ಸ್ಥಿತಿಯನ್ನೂ ಅದು ಸೂಚಿಸುತ್ತದೆ. ಹೀಗೆ ‘ನನ್ನ ತೇಜಸ್ವಿ’ ಪುಸ್ತಕದ ಓದು ತೇಜಸ್ವಿಯವರ ಸೃಜನಶೀಲ ಸಾಹಿತ್ಯವನ್ನು ನಮಗೆ ಅರ್ಥೈಸಲು ಒಂದು ದಾರಿಯಾಗುತ್ತದೆ. ಇದೇ ದೃಷ್ಟಿಯಲ್ಲಿ ತೇಜಸ್ವಿಯವರ ಸಾಹಿತ್ಯವನ್ನು ಪರಿಗಣಿಸಿದರೆ ಏಕಮುಖಿಯಾದ ಗ್ರಹಿಕೆಯೂ ಆಗುವ ಅಪಾಯವೂ ಇದೆ. ಯಾಕೆಂದರೆ ಸಾಹಿತ್ಯ ವಾಚ್ಯಾರ್ಥದ ಜೊತೆ ಲಕ್ಷ್ಯಾರ್ಥವನ್ನೂ ಒಳಗೊಂಡಿರುತ್ತದೆ. ಆದರೆ ತೇಜಸ್ವಿಯವರ ಸಾಹಿತ್ಯದ ಓದಿಗೆ ಈ ಕೃತಿಯೊಂದು ಪೀಠಿಕೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ತೇಜಸ್ವಿಯವರ ಗೆಳೆಯರ ಬಳಗವೂ ಅವರ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ರಾಜೇಶ್ವರಿ ತೇಜಸ್ವಿಯವರು ಹೇಳುವಂತೆ “ತೇಜಸ್ವಿ, ಶಾಮಣ್ಣ, ಸುಂದರೇಶ್ ಮತ್ತು ಶ್ರೀರಾಂ ನಾಲ್ವರೂ ತೀರ ಭಿನ್ನವಾದ ವ್ಯಕ್ತಿತ್ವವುಳ್ಳವರು. ಆದರೂ ಒಟ್ಟಾಗಿ ಸೇರಿಕೊಳ್ಳುತ್ತಿದ್ದರು, ಸಂವಹಿಸುತ್ತಿದ್ದರು”4. ಒಳ್ಳೆಯ ಗೆಳೆಯರ ಬಳಗವೆ ತೇಜಸ್ವಿಯವರ ಶಕ್ತಿಯೂ ಹೌದು. ನಾಡಿನ ಒಂದೊಂದು ಮೂಲೆಯಲ್ಲಿ ಒಬ್ಬೊಬ್ಬರು ಗೆಳೆಯರಿದ್ದರು. ಅವರು ಮನೆಗಳಿಗೆ ಬಂದಾಗ ನಡೆಯುತ್ತಿದ್ದ ಹರಟೆ, ಚರ್ಚೆಯ ವಿಚಾರಗಳಿಂದಲೆ ತೇಜಸ್ವಿಯವರು ನಗರದ ಸತ್ವವನ್ನು ಹೀರಿಕೊಳ್ಳುತ್ತಿದ್ದರು, ಸಮಕಾಲೀನ ಸಂದರ್ಭದ ಬದಲಾವನೆಯನ್ನು ಗ್ರಹಿಸುತ್ತಿದ್ದರು. ಆದ್ದರಿಂದಲೆ ಅವರು ಕಾಡಿನಲ್ಲಿದ್ದರೂ ನಗರದ ಮಾಹಿತಿಯಿಂದ ಎಂದಿಗೂ ದೂರವುಳಿಯಲಿಲ್ಲ. ಇನ್ನು ಅವರ ಬದುಕಿನ ಪ್ರತಿ ಹಂತದಲ್ಲೂ ಗೆಳೆಯರಿಗೆÀ ಮಹತ್ವವಿತ್ತು. ಅದಕ್ಕೆ ಇರಬೇಕು ಪದ್ಮಾಶ್ರೀರಾಂ “ನಿಮ್ಮಲ್ಲಿಗೆ(ತೇಜಸ್ವಿಯವರ ಮನೆಗೆ) ಬಂದವರನ್ನು ಚಿಗುರಿಸಿ ಕಳುಹಿಸುತ್ತೀರಿ. ಒನಕೆಯನ್ನೂ ಚಿಗುರಿಸುವಿರಿ” 5 ಹೇಳುವ ಮಾತು ಬಹಳ ಮುಖ್ಯವಾಗುತ್ತದೆ.
ತೇಜಸ್ವಿಯವರು ಸಂಬಂಧಿಕರು ಮತ್ತು ಮನೆಯವರ ಜೊತೆಗೆ ಹೊಂದಿದ್ದ ಸಂಬಂಧ ಆದರ್ಶವಾದುದು. ತಂದೆ ಮಗ ನಡೆಸುತಿದ್ದ ಸಂಭಾಷಣೆಗಳು, ಪತ್ರವ್ಯವಹಾರಗಳು ಇದನ್ನು ಸ್ಪಷ್ಟಪಡಿಸುತ್ತದೆ. ರಾಜೇಶ್ವರಿ ತೇಜಸ್ವಿಯವರು ಪ್ರಸ್ತಾಪಿಸುವ, ನೆನಪಿಸಿಕೊಳ್ಳುವ ನೆನಪಿನಲ್ಲೂ ಸಂಬಂಧಗಳ ಬಗೆಗಿನ ತೇಜಸ್ವಿಯವರ ನಿಲುವುಗಳೇನು ಎನ್ನುವುದು ದೃಢವಾಗುತ್ತದೆ. ತಂದೆ ಮಗನ ಸಂಬಂಧವನ್ನು ನಾವು ಅರ್ಥೈಸಿಕೊಳ್ಳಬೇಕಾದರೆ ತೇಜಸ್ವಿಯವರ ‘ಅಣ್ಣನ ನೆನೆಪು’ ಪುಸ್ತಕ ಓದಬೇಕು. ಅಲ್ಲಿ ಅವರು ಪ್ರಸ್ತಾಪಿಸುವ ಅಣ್ಣ(ತೇಜಸ್ವಿಯವರ ತಂದೆ: ಕುವೆಂಪು)ನ ನೆನಪುಗಳಲ್ಲಿ ತಂದೆಮಗನ ಸಂಬಂಧಗಳು ಬಿಚ್ಚಿಕೊಳ್ಳುತ್ತದೆ. ತೇಜಸ್ವಿಯವರೊ ಪ್ರತಿಯೊಂದರಲ್ಲಿ ಪ್ರಯೋಗವನ್ನು ಬಯಸುವ ಮನಸ್ಸು, ಕುವೆಂಪುರವರದು ಸದಾ ಅಧ್ಯಯನದ ಬದುಕು. ಇಬ್ಬರೂ ಬದುಕನ್ನು ವಿಭಿನ್ನ ರೀತಿಯಲ್ಲಿ ಅರ್ಥೈಸಿಕೊಂಡವರು. ತೇಜಸ್ವಿಯವರಿಗೆ ದಿನಕ್ಕೊಂದು ವಿಚಾರದಲ್ಲಿ ಕುತೂಹಲ, ಕುವೆಂಪು ಅವರಿಗೆ ಮಗನ ಕುತೂಹಲ ತಣಿಸಬೇಕೊ ಅಥವಾ ಆತನ ಕುತೂಹಲಕ್ಕೆ ತಣ್ಣಿರೆರಚಿ ಮಣಿಸಬೇಕೊ ಎಂಬ ಗೊಂದಲ. ಈ ಸನ್ನಿವೇಶವನ್ನು ಕುವೆಂಪು ನಿಭಾಯಿಸುವ ರೀತಿ, ತೇಜಸ್ವಿಯವರು ಅಣ್ಣನ ಮಾತನ್ನು ಸ್ವೀಕರಿಸಿ ಪಾಲಿಸುವ ರೀತಿ ಮನೋಜ್ಞವಾದುದು. ಗತಿಸಿದ ದಿನಗಳ ನೆನಪುಗಳನ್ನು ಮೆಲುಕು ಹಾಕುವಾಗ, ದಾಖಲಿಸುವಾಗ ಅದು ಅಪಾರವಾದ ನಿಷ್ಠೆಯನ್ನು ಬೇಡುತ್ತದೆ. ಇಲ್ಲದೆ ಹೋದರೆ ಬರಹಗಾರ ಕಲ್ಪಿಸಿಕೊಂಡು ಬರೆದ ಕಥೆಯಾಗುತ್ತದೆಯೇ ವಿನಾಃ ವಾಸ್ತವಾಂಶಗಳು ಇರುವುದಿಲ್ಲ. ಇದರಿಂದ ಓದುಗನಿಗೆ ವಂಚಿಸಿದಂತಾಗುತ್ತದೆ. ತೇಜಸ್ವಿಯವರು ಅಣ್ಣನ ನೆನೆಪುಗಳನ್ನು ಬರೆಯುತ್ತಾ ಒಂದು ಹಂತದಲ್ಲಿ ವಸ್ತುನಿಷ್ಠವಾಗಿ ಬರೆಯಲಾಗುತ್ತಿಲ್ಲ ಎನ್ನುವ ಕಾರಣಕ್ಕಾಗಿಯೇ ನಿಲ್ಲಿಸಿಯೇ ಬಿಟ್ಟರು. ಆದ್ದರಿಂದ ‘ನನ್ನ ತೇಜಸ್ವಿ’ ಮತ್ತು ‘ಅಣ್ಣನ ನೆನಪು’ ಪುಸ್ತಕಗಳೆರಡು ನೆನಪುಗಳನ್ನು ದಾಖಲಿಸುವಲ್ಲಿ ವಾಸ್ತವಾಂಶಗಳನ್ನು ಮರೆಮಾಚಿಲ್ಲ ಎನ್ನುವುದು ಆ ಪುಸ್ತಕಗಳಿಗೆ ಬಂದ ಪ್ರತಿಕ್ರಿಯೆಗಳು ನಿರೂಪಿಸುತ್ತವೆ.
ರಾಜೇಶ್ವರಿ ತೇಜಸ್ವಿಯವರು ಕೆ.ಪಿ ತೇಜಸ್ವಿಯವರ ಬದುಕನ್ನು ಕಟ್ಟಿಕೊಡುವಲ್ಲಿ ಸಾರ್ಥಕ್ಯವನ್ನು ಕಂಡಿದ್ದಾರೆ. ಕುವೆಂಪುರವರ ತತ್ವಗಳನ್ನು ಅನುಸರಿಸಿಸುತ್ತಲೇ ತನ್ನದೇ ವ್ಯಕ್ತಿತ್ವವನ್ನು ರೂಪಿಸಿಕೊಂಡ ತೇಜಸ್ವಿಯವರು ಮಾದರಿ ಸಾಹಿತಿ. ಕನ್ನಡ ಸಾಹಿತ್ಯದಲ್ಲಿ ಅನೆಕ ಸಾಹಿತಿಗಳು ಆಗಿ ಹೋಗಿದ್ದಾರೆ. ಅವರಲ್ಲಿ ಇಂದಿಗೂ ನೆನಪಿಸುವ ಸಾಹಿತಿಗಳಲ್ಲಿ ತೇಜಸ್ವಿಯೂ ಒಬ್ಬರು. ತೇಜಸ್ವಿಯವರು ಕೇವಲ ಸಾಹಿತ್ಯ ಲೋಕಕ್ಕೆ ಮಾತ್ರ ಸೀಮಿತವಾದವರಲ್ಲ. ಅವರು ಈ ಮೊದಲೆ ಪ್ರಸ್ತಾಪಿಸಿದಂತೆ ಫೋಟೋಗ್ರಫಿ, ಫಿಶರಿಂಗ್, ಕೃಷಿ, ರೈತ ಚಳುವಳಿ, ಹೋರಾಟ, ಮುಖಪುಟ ವಿನ್ಯಾಸ, ತಂತ್ರಜ್ಞಾನ ಅಭಿವೃದ್ಧಿ, ಸಾಹಿತ್ಯ ಕೃಷಿ ಮುಂತಾದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನಸಾಮಾನ್ಯರ ಬದುಕನ್ನು ಪ್ರವೇಶಗೈದು ಜನಮಾನಸದಲ್ಲಿ ನೆಲೆ ನಿಂತವರು. ಆದ್ದರಿಂದ ಅವರ ಬಹುಮುಖಿ ವ್ಯಕ್ತಿತ್ವದ ದರ್ಶನವನ್ನು ಮಾಡಿಸುವ ‘ನನ್ನ ತೇಜಸ್ವಿ’ ಪುಸ್ತಕವು ಸಾಹಿತ್ಯದ ವಿದ್ಯಾರ್ಥಿಗಳ ಜೊತೆಗೆ ಸಮಸ್ತ ಕನ್ನಡಿಗರು ಓದಬೇಕಾದ ಅಮೂಲ್ಯ ಪುಸ್ತಕ.
ಅಡಿ ಟಿಪ್ಪಣಿ
1. ಅಣ್ಣನ ನೆನಪು-ಪುಟ-202
2. ಅಬಚೂರಿನ ಪೋಸ್ಟಾಫಿಸು ಮುನ್ನುಡಿ
3. ನನ್ನ ತೇಜಸ್ವಿ-ಪುಟ-167-168
4. ಅದೇ-ಪುಟ-189
5. ಅದೇ-ಪುಟ-413
:-ಪ್ರಶಾಂತ್ ದಿಡುಪೆ
ತುಂಬಾ ಚೆನ್ನಾಗಿದೆ...
ಪ್ರತ್ಯುತ್ತರಅಳಿಸಿSuper sir
ಪ್ರತ್ಯುತ್ತರಅಳಿಸಿ