ತುಂಡುಭೂಮಿ
ತುಕ್ರನಿಗೆ ಎರಡು ದಿನದಿಂದ ಪುರುಸೊತ್ತಿಲ್ಲ. ಎಲೆಯಡಿಕೆ ಹಾಕಲೂ ಬಿಡುವಿಲ್ಲದಷ್ಟು ಕೆಲಸ. ಕೊರಗಪ್ಪ ಶೆಣೈರ ಮಕ್ಕಳ ಜಗಳವೀಗ ಆಸ್ತಿ ಪಾಲಾಗುವಲ್ಲಿಗೆ ಬಂದು ಮುಟ್ಟಿತ್ತು. ತುಕ್ರನಿಗೆ ಈ ಪಾಲಿನ ದೆಸೆಯಿಂದ ಇಡೀ ಗುಡ್ಡೆ ಬೈಲೆಲ್ಲ ಅಲೆದಾಡಿ, ಸರ್ವೆಯ ಸರಪಳಿಯೆಳೆದು ಸಾಕು ಸಾಕಾಗಿತ್ತು ಆದರೂ ಆತನಿಗೆ ಖುಷಿಯೊ ಖುಷಿ. ಈ ನಡುವೆ ಆ ಜಾಗ ನನ್ನದು, ಅವಳಿಗೇಕಲ್ಲಿ, ಆ ಜಾಗ ಇವಳಿಗ್ಯಾಕೆ ಎನ್ನುವ ತಕರಾರಿನಿಂದ ಎರಡೆರಡು ಬಾರಿ ಸರ್ವೆಯಾಯಿತು. ತುಕ್ರನಿಗೆ ಆ ಸರಪಳಿಯನ್ನು ನೋಡುವಾಗÀ ಹೆಬ್ಬಾವನ್ನು ಕಂಡಂತಾಗುತ್ತಿತ್ತು. ಅವನ ಸಣಕಲು ದÉೀಹ ಆ ಮಣಭಾರದ ಸರಪಳಿಯನ್ನು ಇಡೀ ದಿನ ಹಿಡಿದು ಸುತ್ತಾಡಲು ಹೆಣಗುತ್ತಿತ್ತು. ಮೂಳೆಯ ಮೇಲೆ ಡಾಂಬರು ಹೊಯ್ದದಂತಿರುವ ಚರ್ಮ. ಗುಂಡಿಯ ನೀರಿನಲ್ಲಿ ಕಾಣುವ ಸೂರ್ಯನಂತೆ ಗುಳಿಬಿದ್ದ ಕಣ್ಣು. ಊರ ರಸ್ತೆಯಲ್ಲಿ ಯಥೇಚ್ಛ ಉಬ್ಬು ತಗ್ಗುಗಳಿರುವಂತೆ ಈತನ ದೇಹ ರಕ್ತಮಾಂಸ ತುಂಬಿಕೊಳ್ಳದೆ ಕೈಕಾಲಿನ ಗಂಟುಗಳೆ ಎದ್ದುಕಾಣುತ್ತಿದ್ದವು.
ಆತನಿಗೆ ಸರ್ವೆಗಿಂತಲೂ ಮನಸು ಕೊರೆಯುವ ವಿಚಾರವೆಂದರೆ. ಶೆಣೈ ಮಕ್ಕಳು ಆ ಜಾಗ ನನ್ನದು, ಈ ಜಾಗ ನನ್ನದು ಎನ್ನುವಾಗÀ ಬೇಸರವಾಗುತ್ತಿತ್ತು, ಅದೆಲ್ಲ ನನ್ನದು ಎಂದು ಆತನ ಮನಸ್ಸು ತಳಮಳಿಸುತ್ತಿತ್ತು. ಆತ ಬಹುಕಾಲದಿಂದ ಶೆಣೈಯೊರ ಮನೆಯಲ್ಲಿ ಜೀತದಾಳಿನಂತೆ ಕೆಲಸ ಮಾಡಿದವ, ಮೇಲಾಗಿ ಒಕ್ಕಲಿನವ. ಅವ ಹೇಳುವ
ಧಣಿಗಳ ಗದ್ದೆಯ ಮಣ್ಣಿನ ಗುಣ ನನಗೆ ಗೊತ್ತಿರುವಷ್ಟು ವರಿಗೆ ಮತ್ತು ಅವರ ಮಕ್ಕಳಿಗೆ ಗೊತ್ತಿಲ್ಲ. ಅಲ್ಲಿದ್ದ ಪ್ರತಿಯಂಗುಲ ಜಾಗದಲ್ಲಿ ಹೆಜ್ಜೆಯಾಡಿಸಿದ್ದೇನೆ. ಪಾಳುಬಿದ್ದು ಗೊಂಡಾರಣ್ಯದಂತಿದ್ದ ಕಾಡುಬಳ್ಳೆಯನ್ನು ಕಡಿದು ಭೂಮಿಗೊಂದು ಹೊಸರೂಪ ನೀಡಿದವರು ನಾನು ತಿಮ್ಮಿಯಲ್ಲವೆ? ನಮ್ಮ ರಕ್ತ ಬೆವರಾಗಿ ಹರಿದಿದ್ದರಿಂದಲ್ಲವೆ ಭೂಮಿ ಹದಕ್ಕೆ ಬಂದಿದ್ದು. ಈಗ ಮುಡಿಗಟ್ಟಲೆ ಅಕ್ಕಿ ನೀಡುವ ಗದ್ದೆ. ಕ್ವಿಂಟಾಲ್ ಕ್ವಿಂಟಲ್ ಅಡಿಕೆ. ಸಾವಿರದ ಲೆಕ್ಕಚಾರದಲ್ಲಿ ಮಾರುವ ತೆಂಗು ಇವೆಲ್ಲ ನನ್ನ ಮತ್ತು ತಿಮ್ಮಿಯ ದುಡಿಮೆಯ ಫಲವಲ್ಲವೆ. ನಾನು ಆರಂಭದಲ್ಲಿ ಕಾಳ ಮತ್ತು ಬೊಲ್ಲರನ್ನು ಗದ್ದೆಗೆ ಹೂಡಿದಾಗ ಅಣಕಿಸಿದವರಿಗೆ ಲೆಕ್ಕವುಂಟಾ. ಬಾಕಿಯವರಿರಲಿ ತಿಮ್ಮಿಯೇ
‘ನಿಮ್ಮ ಗದ್ದೆಯ ಮರ್ಲ್ನಿಂದ ಬೆಳೆ ಕೈಕೊಟ್ಟರೆ ದನಿ ಮನೆಯಿಂದ ಹೊರಹಾಕುವುದು ಗ್ಯಾರಂಟಿ’ ಎಂದಿದ್ದಳು
ನಾನಾಗ ‘ನಿನಗೆಂತ ಗೊತ್ತು ಮಾರಾಯ್ತಿ. ನನ್ನ ಪ್ರಾಣ ಹೋದರು ಸರಿ ಈ ಗದ್ದೆಯಲ್ಲಿ ಏಣೇಲು, ಸುಗ್ಗಿಯ ಬೆಳೆ ಬಿಡು, ಕಟ್ಟದ ನೀರು ಸಿಕ್ಕಿದರೆ ಕೊಳಕ್ಕೆ ಬೆಳೆಯನ್ನೂ ಬೆಳೆಯದೆ ಬಿಡುವವನಲ್ಲ ಈ ತುಕ್ರ. ನನ್ನನೇನು ಅಷ್ಟು ಸುಮಾರೆಂದು ತಿಳಿದಿದ್ದೀಯ’ ಎಂದಿದ್ದೆ. ಮಾತ್ರವಲ್ಲ ಮಾಡಿ ತೋರಿಸಿದ್ದೇನೆ ಎನ್ನುವ ಅವನ ಮಾತಿನಲ್ಲಿ ಸತ್ಯವಿದೆ. ಯಾರದರೂ ಆತನ ಬಗ್ಗೆ ಕುತೂಹಲ ತಾಳಿ ಪರಿಚಯ ಕೇಳಿದರೆಂದರೆ...
ತಿರುವೆಗುತ್ತು ಶೆಣೈಯವರು ಯಕ್ಷಗಾನದಲ್ಲಿ ದೊಡ್ಡ ಹೆಸರು ಮಾಡಿದವರು. ಅವರು ಮೇಳದ ಆಟಗಳಲ್ಲಿ ಮಾಡುವ ಧರ್ಮರಾಯನ ಪಾತ್ರವನ್ನು ಕಂಡು ಎಷ್ಟೋ ಜನ ಅವರು ಆಟ ಮುಗಿಸಿ ಚೌಕಿಗೆ ಬಂದ ನಂತರ ಚೌಕಿಗೆ ಬಂದು ಆಶೀರ್ವಾದ ಪಡೆದವರಿದ್ದಾರೆ. ಕೊರಗಪ್ಪ ಶೆಣೈಯವರ ಧರ್ಮರಾಯನ ಪಾತ್ರ ಎಂದರೆ ಅಷ್ಟು ತೂಕ, ಅಷ್ಟು ಪ್ರಸಿದ್ಧಿ. ಆದರೆ ಮೆಳದ ತಿರ್ಗಾಟದಲ್ಲಿ ಮನೆಯಲ್ಲಿ ಮಾತ್ರ ತಂದೆಯಿಂದ ಬಂದಿದ್ದ ಆಸ್ತಿಯನ್ನು ಜೀರ್ಣೊದ್ಧಾರ ಮಾಡದೆಬಿಟ್ಟಿದ್ದರು. ಪಾಲಿಗೆ ಬಂದದ್ದರಲ್ಲಿಯೇ ಸಂತೃಪ್ತಿಯಿಂದ ದಿನದೂಡುತಿದ್ದರು. ಆಗ ನಾನು ಬಂದು ಸೇರಿದೆ. ಅವರು ಯಾವೂರೆಂದು ಕೇಳದೆ ಸುಳ್ಯದಿಂದ ಬಂದ ನನ್ನನ್ನು ಒಕ್ಕಲಿನವನನ್ನಾಗಿ ಮಾಡಿಕೊಂಡು ಇಲ್ಲಿವರೆಗೆ ಹೊಟ್ಟೆಗೆ ಬಟ್ಟೆಗೆ ಕೊಡುತ್ತಿದ್ದಾರೆ. ನಾನು ತಿಮ್ಮಿಯ ಸಲುವಾಗಿ ಊರು ಬಿಟ್ಟವ ಈ ಊರು ಪಾಲಾದ್ದರಿಂದ ಧನಿಗೊಂದು ಆಳಾಯಿತು. ನನಗೊಂದು ಇರಲು ಸೂರಾಯಿತು.
ನಾನು ಬಂದ ನಂತರವಲ್ಲವಾ ಈ ತೋಟಗಳು ನೋಡುವಂತಾಗಿದ್ದು. ಹಿಂದೆ ಹಡಿಲು ಬಿದ್ದ ಬೈಲು, ಬೊಟ್ಟು ಗದ್ದೆಗಳಲ್ಲಿ ಈಗ ಎರಡೆರಡು ಬೆಳೆತೆಗೆಯುತ್ತಿರುವುದು ಗಂಡಹೆಂಡಿರಿಬ್ಬರೆ ಆರಂಭದಲ್ಲಿ ಜೀವ ತೇದಿದ್ದರಿಂದ. ಧನಿಯ ಕೈಯಲ್ಲಿ ನಾಲ್ಕು ಕಾಸು ಓಡಾಡಲು ಶುರುಮಾಡಿದ ಮೇಲೆ ಕೂಲಿಗೆ ಜನ ಮಾಡಿ ಕೆಲಸ ಮಾಡಿಸಿದ್ದು ಬಿಟ್ಟರೆ ನಮ್ಮ ಮನೆಯಂತೆ ಈ ಜಾಗದಲ್ಲಿ ದುಡಿದಿದ್ದೇನೆ. ಧನಿಯ ಮಕ್ಕಳು ಓದಿ ಪಟ್ಟಣದಲ್ಲಿ ಕೆಲಸ ಹಿಡಿದರು. ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯೂ ಆಗಿದೆ. ಮಗಾ ಕಂಪೆನಿ ಉದ್ಯೋಗಕ್ಕೆ ಸೇರಿಕೊಂಡವ ಅಲ್ಲೆ ಮದುವೆಯಾಗಿದ್ದಾನಂತೆ. ನನ್ನ ಮಗಾ ಪ್ರೈಮರಿ ಮುಗಿಸಿ ಧಣಿಯರ ಅಂಗಳ ಅಡ್ಡಾಡಲು ಶುರು ಮಾಡಿದವ ಇಲ್ಲೆ ಖಾಯಂ ಆಗಿಬಿಟ್ಟ. ಈಗ ಮರದಿಂದ ಬಿದ್ದು ಸೊಂಟ ಬಲ ಇಲ್ಲದೆ ಮನೆಯಲ್ಲಿದ್ದಾನೆ. ಧಣಿಗಳು ಆಸ್ಪತ್ರೆ ಅಂತಾ ಕೆಲವೆಡೆ ಸುತ್ತಾಡಿದರು ಪ್ರಯೋಜನವಾಗಲಿಲ್ಲ. ಹೀಗೆ ಸುಳ್ಯದ ಊರು ಬಿಟ್ಟ ನಾನು ಶೆಣೈಯೊರ ಆಶ್ರಯದಲ್ಲಿ ಬದುಕು ಕಟ್ಟಿಕೊಂಡೆ. ಎಂದು ಕಥೆ ಹೇಳುತ್ತಿದ್ದ. ಆದರೆ ಯಾವತ್ತಿಗೂ ಸುಳ್ಳು ಹೇಳುವವನಲ್ಲ. ಆತನ ಪ್ರಮಾಣಿಕತೆ ನಂಬಿಕೆಯಿಂದಾಗಿಯೇ ತಿರುವೆಗುತ್ತಿನಲ್ಲಿ ಆತನಿಗೆ ನೆಲೆ ಸಿಕ್ಕಿದ್ದು.
ಇಷ್ಟೇಲ್ಲಾ ನಡೆದರೂ ಆತನ ಬದುಕಿನಲ್ಲಿ ಯಾವ ಬೆಳವಣಿಗೆಯೂ ಆಗಿಲ್ಲ. ಇಬ್ಬರಿದ್ದ ಸಂಸಾರದಲ್ಲಿ ಮಗನೊಬ್ಬ ಸೇರಿ ಮೂರು ಮಂದಿಯಾದ್ದದ್ದೇ ಬೆಳವಣಿಗೆ. ಮಳೆಗಾಲದಲ್ಲಿ ಸೋರುವ ಮಾಡಿಗೆ ಹೆಂಚು ಹೊದಿಸುವಷ್ಟು ಕಾಸು ಹೊಂದಿಸಲೂ ಅವನಿಂದಾಗಲಿಲ್ಲ. ಧನಿಗಳು ಆ ಬಗ್ಗೆ ಇಲ್ಲಿ ತನಕ ವಿಚಾರಿಸದೆ ಇದ್ದುದರಿಂದ ಆತನೂ ಸುಮ್ಮನಿದ್ದ.
ಒಮ್ಮೆ ಜಗಲಿಯಲ್ಲಿ ಕುಳಿತು ಎಲೆಯಡಿಕೆ ಹಾಕುತ್ತಾ ಮಾತನಾಡುವಾಗ ಶೆಣೈಯವರು
‘ತುಕ್ರಾ ಆ ಮಜಲು ಗದ್ದೆಯ ಫಸಲು ಹೇಗಿದೆ ಮರಾಯ, ನನಗಂತೂ ಅದನ್ನು ಸುಧಾರಿಸಲು ಆಗೊದಿಲ್ಲ. ಪಾಲಾಗುವಾಗ ಮಜಲಿನ ಕೆಳಗಿನ ಎರಡು ಕುಲೆಂಜಿ ಗದ್ದೆ ನಿನ್ನ ಹೆಸರಿಗೆ ಮಾಡಿಸುತ್ತೇನೆ’ ಅಂದರು
ಅದನ್ನು ಕೇಳಿದಂದಿನಿಂದ ತುಕ್ರನಿಗೆ ಧನಿಯರ ಬಗೆಗೆಗಿನ ಗೌರವ ಇನ್ನೂ ಹೆಚ್ಚಾಯಿತು. ಎರಡು ಕುಲೆಂಜಿಯಾದರೂ ಅರ್ಧಎಕರೆಗಿಂತಲೂ ಹೆಚ್ಚಾದ ಭೂಮಿಯದು. ಅವನೆ ಹಡಿಲು ಬಿಳುತ್ತಿದ್ದ ಆ ಗದ್ದೆಗಳಿಗೆ ಮರುಜಿವ ನಿಡಿದವ ಆದ್ದರಿಂದ ಖುಷಿ ಇನ್ನೂ ಹೆಚ್ಚಾಯಿತು.
ಈಗ ಸರ್ವೆಯ ವಿಷಯ ಕಿವಿಗೆ ಬಿದ್ದಿದ್ದೆ ತಡ ತುಕ್ರ ಬೆಳ್ಳಂಬೆಳಗ್ಗೆ ಧನಿಯರ ಅಂಗಳದಲ್ಲಿ ಪ್ರತ್ಯಕ್ಷನಾದ.
‘ಧನಿಗಳÉೀ.. ಆ.. ಮಜಲಿನ ಗದ್ದೆ ವಿಷ್ಯಾ.. ಕೆಳಗಿನ ಕುಲೆಂಜಿ ಗದ್ದೆಗಳನ್ನು..’ ಅಂತಾ ರಾಗ ಎಳೆದಾಗಲೆ ಶೆಣೈಯವರಿಗೆ ತಿಳಿಯಿತು.
‘ಅದು ನಿನಗೇ ಮಾರಾಯ ನಾನು ಅವತ್ತು ಹೇಳಿಲ್ಲವಾ.. ನೋಡು ನೀನೆ ನಾಳೆ ನನ್ನ ಮಕ್ಕಳಿಗೆ ಜಾಗ ಪಾಲಾಗುವಾಗ ಸರಪಳಿ ಹಿಡಿಯಬೇಕು. ನಮ್ಮ ಜಾಗದ ವರ್ಗದ ಕಲ್ಲು, ಜಾಗದ ಸೀಮೆ ನಿನಗೆ ಗೊತ್ತಿರುವುವಷ್ಟು ನನಗೆ ನನ್ನ ಮಕ್ಕಳಿಗೆಲ್ಲಿ ಗೊತ್ತಿದೆ ಮಾರಾಯ.. ನಾಳೆ ಬಾ’ ಅಂದರು.
ವಳಚ್ಚಿಲ್ನ ಸರ್ವೆಯಾಗಿ ಗೇರು ತೋಟದ ಪಾಲಾಯಿತು. ನದಿಯ ಆಚೆಗಿನ ಬೈಲಿನಲ್ಲಿ ನೆಟ್ಟಿದ್ದ ಅಡಿಕೆ ಮತ್ತು ತೆÀಂಗಿನತೋಟದ ಸರ್ವೆಯಾಯ್ತು. ಬೈಲು, ಬೊಟ್ಟು ಗದ್ದೆಗಳ ಸರ್ವೆ, ಪಾಲಿನ ನಂತರ ಮೂರನೆ ದಿನ ಮಜಲು ಗದ್ದೆಯ ಪಾಲು. ತುಕ್ರ ಸಣಕಲು ದೇಹ ಹಿಡಿದುಕೊಂಡು ಎರಡು ದಿನದಿಂದ ಓಡಾಡಿದ್ದೆ ಓಡಾಡಿದ್ದು. ಆತನಿಗೆ ದಣಿವಿಲ್ಲ ತುಂಡುಭೂಮಿಯ ಒಡೆಯನಾಗುವ ಆಸೆಯೇ ಆತನ ವಯಸ್ಸನ್ನು ಆ ದಿನ ಕಡಿಮೆ ಮಾಡಿತ್ತು. ಕುಂದುತ್ತಿದ್ದ ಶಕ್ತಿಯನ್ನು ಒಮ್ಮೆಲೆ ಮೈಮೇಲೆ ಅವಾಹಿಸಿಕೊಡಂತೆ ಓಡಾಡುತ್ತಿದ್ದ.
ತಂದೆ ಮಕ್ಕಳು ಮಜಲು ಗದ್ದೆಯ ಕಟ್ಟಹುಣಿಯಲ್ಲಿ ಬಂದು ನಿಂತಿದ್ದರು. ಮಕ್ಕಳು ಮೇಲಿನ ಗದ್ದೆ ಒಳ್ಳೆಯದೊ ಅಥವಾ ಕೆಳಗಿನದೊ ಎನ್ನುವ ಲೆಕ್ಕಚಾರದಲ್ಲಿದ್ದಾರೆ. ತುಕ್ರನಿಗೆ ಕೆಳಗಿನ ಕುಲೆಂಜಿ ಗದ್ದೆಗಳ ಒಡೆಯನಾಗುವ ಖುಷಿಯಲ್ಲಿಯೇ ಬೇಗೊಮ್ಮೆ ಅಳತೆಯನ್ನು ಮುಗಿಸಲು ಹವಣಿಸುತ್ತಿದ್ದ. ಸರ್ವೆಯರ್ ಸಹಾಯಕನಂತೂ ಇವರ ಪಾಲು ಪಟ್ಟಿಯನ್ನೊಮ್ಮೆ ಮುಗಿಸಿ ಕೈತೊಳೆದುಕೊಳ್ಳುವ ತರಾತುರಿಯಲ್ಲಿದ್ದ. ಅವನಿಗೆ ಇವರ ಜಗಳದಲ್ಲಿ ಎರಡೆರಡು ಬಾರಿ ತೊಡು, ಪೊದೆಗಳಲ್ಲಿ ಸರಪಳಿ ಹಿಡಿದು ಸುತ್ತಿ ಸಾಕಾಗಿ ಕೆಲಸಕ್ಕೆ ತಿಲಾಂಜಲಿ ಇಡುವ ನಿರ್ಧಾರಕ್ಕೆ ಬಂದಿದ್ದ. ಆಗಲೆ ಶೆಣೈಯವರು ಗಂಟಲು ಸರಿಮಾಡಿಕೊಂಡು
‘ನೋಡಿ ಆ ಕೆಳಗಿನ ಎರಡು ಕುಲೆಂಜಿ ಗದ್ದೆಯನ್ನು ತುಕ್ರನಿಗೆ ಬಿಟ್ಟು ನಿಮಗೆ ಯಾವ ಗದ್ದೆಯನ್ನಾದರೂ ಪಾಲು ಮಾಡಿಕೊಳ್ಳಿ. ಇಷ್ಟು ದಿನ ನಮ್ಮ ಮನೆಗಾಗಿ ದುಡಿದಿದ್ದಾನೆ. ಈ ಜಾಗವನ್ನು ಬೆಳಗಿದವನೂ ಅವನೆ. ಅವನಿಗೂ ಯಾರೂ ಇಲ್ಲ ಅದೆರಡು ಗದ್ದೆಗಳನ್ನು ಅವನ ಪಾಳಿಗೆ ಬಿಟ್ಟು ಬಿಡಿ’ ಅಂದರು.
ತುಕ್ರನಿಗೆ ಧನಿಯ ಮಾತು ಕೇಳಿದ್ದೆ ಮಹಾಭಾರತದ ಧರ್ಮರಾಯ ಮಜಲಿಗೆ ಬಂದು ನಿಂತಷ್ಟು ಖುಷಿಯಾಯ್ತು. ಮಕ್ಕಳಿಗೆ ಅಪ್ಪನ ಈ ಮಾತು ರುಚಿಸಲಿಲ್ಲ. ಸಿಕ್ಕಿದ್ದನ್ನು ತುರುಕಿಕೊಳ್ಳುವ ತವಕದಲ್ಲಿದ್ದ ಅವರಿಗೆ ನಡುವೆ ಮುಳ್ಳು ತೊಡರಿದಂತಾಯಿತು. ಅಪ್ಪನ ಮಾತು ಅಪರಾಧವಾಯ್ತು.
ಕಿರಿ ಮಗ ಕಿರಣ ‘ತುಕ್ರ ಇಷ್ಟು ದಿನ ಮನೆಯಲ್ಲೇನು ಧರ್ಮಕ್ಕೆ ದುಡಿದಿದ್ದನೆ. ಅವನ ಸಂಸಾರವನ್ನು ಇಷ್ಟು ದಿನ ಸಾಕಿದ್ದೆ ದೊಡ್ಡ ವಿಷ್ಯಾ. ಆ ರೋಗಿ ಮಗನ ಚಿಕಿತ್ಸೆಗೆಷ್ಟು ದುಡ್ಡು ಸುರಿದಿದ್ದಿರಿ, ಅವನೆಲ್ಲ ಲೆಕ್ಕವಿಟ್ಟಿದ್ದರೆ ಅವನೆ ನಮಗೆ ಸಾಲ ಕೊಡಬೇಕು. ಈಗ ಜಾಗದಲ್ಲಿ ಪಾಲು ಕೊಡಬೇಕಂತೆ. ಇಲ್ಲಿಮಾತ್ರ ಯಾಕೆ ಎಲ್ಲಾ ಕಡೆ ಕೊಡಬೇಕಿತ್ತು. ಇಟ್ಸ್ ಟೂ ನಾನ್ ಸೆನ್ಸ್ ಅಪ್ಪಾ’ ಅಂದ. ಹೆಣ್ಣು ಮಕ್ಕಳಿಬ್ಬರೂ ತಮ್ಮ ನಡುವಿನ ಮೈಮನಸ್ಸನ್ನೂ ಮರೆತು ತಮ್ಮನ ಮಾತಿಗೆ ದನಿಗೂಡಿಸಿದರು.
ಮಕ್ಕಳು ಹೇಳಿದ ಮಾತಿನಿಂದ ಶೆಣೈಯವರಿಗಾದ ದುಃಖಕ್ಕಿಂತಲೂ ತುಕ್ರನಿಗಾದ ಅವಮಾನ ಹೆಚ್ಚಯಿತೆಂದೆನಿಸಿತು.
‘ಯಕ್ಷಗಾನದಲ್ಲಿ ನಾನು ಧರ್ಮರಾಯನ ಪಾತ್ರದಲ್ಲಿ ಮಿಂಚಿದ್ದ್ಟು. ಪ್ರಸಿದ್ದಿಯಾದದ್ದೆ ಬಂತೆ ಹೊರತು ತುಂಡು ಭೂಮಿಯೊಂದನ್ನು ತುಕ್ರನಿಗೆ ದಯಪಾಲಿಸಲಾಗಲಿಲ್ಲ. ಬಲವಂತವಾಗಿ ನೀಡುವೆನೆಂದರೂ ಆ ಸ್ವಾತಂತ್ರ್ಯವೂ ಇಲ್ಲ. ಓದಿದವರ ಮುಂದೆ ಕೋರ್ಟು ಕಛೇರಿ ಅಲೆಯುವ ಸಾಮಾಥ್ರ್ಯ ನನಗಿಲ್ಲ. ಆಟದಲ್ಲಿ ಪಾಂಡವರೆಲ್ಲ ನನ್ನ ಮಾತನ್ನು ಆಜ್ಞೆಯಂತೆ ಪಾಲಿಸಿದರೆ ಇಲ್ಲಿ ನನ್ನ ಮಕ್ಕಳೆ ಎದುರಾಡುವಂತಾಯಿತು. ಸತ್ಯಕ್ಕೆ ಹೆಸರಾದ ಪಾತ್ರವನ್ನು ಮಾಡುತ್ತಿದ್ದ ನಾನೇ ಸುಳ್ಳುಗಾರನಾಗಬೇಕಾಯಿತು. ಮಾತುಕೊಟ್ಟು ವಂಚಿಸಿದೆ. ಯಾರಿಗೂ ಕೊಡದಿರುವುದಕ್ಕಿಂತಲೂ ದೊಡ್ಡ ಅಪರಾಧ ಆಸೆ ಹುಟ್ಟಿಸುವುದು.’ ಎನ್ನುತ್ತಾ ಶೆಣೈಯವರು ಮನೆದಾರಿ ಹಿಡಿದರು.
ತುಕ್ರ ಇನ್ನೂ ಸರಪಳಿ ಹಿಡಿದುಕೊಂಡಿದ್ದ. ಈಗಾತನಿಗೆ ನಿಂತ ಜಾಗ ಪರಕೀಯರದ್ದು ಎನ್ನಿಸಿತು. ಅಲ್ಲಿಯವರಗೆ ತಮ್ಮದೆ ಜಾಗವೆಂದು ದುಡಿದಿದ್ದ. ಈಗ ‘‘ನಾನೊಬ್ಬ ಸಾಲಗಾರನಂತೆ. ನನಗೆ ಜಾಗ ನಿರಾಕರಿಸಿದ್ದರೂ ನನಗೇನೂ ಆಗಬೇಕಿದ್ದಿರಲಿಲ್ಲ. ಸ್ವಂತ ಊರು ಬಿಟ್ಟವನಿಗೆ ಯಾವೂರಾದರೇನು. ನಾನು ಧಣಿ ಹೇಳಿದ ಮಾತಿಗೆ ಕಟ್ಟುಬಿದ್ದು ಕನಸು ಕಂಡಿದ್ದೆ ಅಷ್ಟೆ. ನನ್ನ ಮಗ ರೋಗಿಷ್ಠನಲ್ಲ. ಇವರ ತೋಟದ ಬುಡಕ್ಕೆ ಗೊಬ್ಬರ ಹಾಕಲು ಸೊಪ್ಪು ಕಡಿಯಲು ಹೋಗಿ ಮರದಿಂದ ಬಿದ್ದು ಸೊಂಟ ಮುರಿದು ಬಿದ್ದಿದ್ದಾನೆಯೇ ಹೊರತು ನನ್ನ ಸಂಸಾರಕ್ಕೇನು ದುಡಿದಿಲ್ಲ. ನನ್ನ ಬೆವರಿಗೆ ಬೆಲೆ ಕಟ್ಟಿದರಲ್ಲಾ. ಅದೂ ಸಾಲಗಾರನಂತೆ. ಮನಸ್ಸಿಗೆ ವಿಷಹಾಕಿಬಿಟ್ಟರಲ್ಲ.’ ಅಂದುಕೊಂಡ. ಮನಸ್ಸುಮೂರಾ ಬಟ್ಟೆಯಾಯ್ತು.
ಏನೆ ಆಗಲಿ ಧಣಿ ಜಾಗವನ್ನು ನನ್ನ ಉಸ್ತುವಾರಿಯಲ್ಲಿ ಪಾಲು ಮಾಡಿಕೊಡಬೇಕೆಂದಿದ್ದರು ಅದನ್ನು ಪೂರೈಸಿದರೆ ಆಯಿತು ಎನ್ನುತ್ತಾ ಮಜಲು ಗದ್ದೆಯನ್ನು ಪಾಲು ಮಾಡಿದರು. ತುಕ್ರ ಅಂಗುಲಂಗುಲವನ್ನು ಸರ್ವೆಯರ್ ಸಹಾಯಕನ ಜೊತೆಗೂಡಿ ಅಳೆದ. ಎರಡು ದಿನಗಳಿಂದಿದ್ದ ಉತ್ಸಾಹ ಇಂಗಿಯೇ ಹೋಗಿತ್ತು. ಕೇವಲ ಮಂಜನ ದೇಹವೊಂದು ಓಡಾಡುತ್ತಿಷ್ಟೆ. ಅಲ್ಲೆ ಗದ್ದೆಯ ಹುಣಿಯಲ್ಲಿರಿಸಿದ್ದ ಬೆದರು ಬೊಂಬೆಯೂ ಗಾಳಿಗೆ ಕೈಕಾಲು ಅಲ್ಲಾಡಿಸುತ್ತಿತ್ತು. ಅದಕ್ಕೂ ದೇಹವಷ್ಟೆ ಮನಸ್ಸಿಲ್ಲ ಜೀವವಿಲ್ಲ ಅದನ್ನೇ ಪ್ರಾಣಿಗಳು ಮನುಷ್ಯನೆಂದು ಭಾವಿಸುವುದಿಲ್ಲವೆ. ಮಂಜನಿಗೂ ಶೆಣೈ ಮಕ್ಕಳು ಆ ಸಾನದಲ್ಲಿ ಇರಿಸಿಬಿಟ್ಟರು. ಅವನಿಂದಾದ ಯಾವ ಸಹಾಯವನ್ನು ಅವರು ನೆನಪಿಸುವ ಕನಿಷ್ಠ ವ್ಯವಧಾನವನ್ನೂ ತೋರಲಿಲ್ಲ. ಬದಲಾಗಿ ಸಾಲಗಾರನೆಂದು ಜರಿದು ಬಿಟ್ಟರು. ಮಜಲಿನ ಕೆಳಗಿನ ಕುಲೆಂಜಿಗದ್ದೆಗಳನ್ನು ಅಳೆಯುವಾಗ ತುಕ್ರನ ಕೈ ಮಣಭಾರದ ಸರಪಳಿಯನ್ನು ಅಲುಗಿಸುವಷ್ಟು ನಡುಗುತ್ತಿತ್ತು. ಎದೆಭಾರವಾಯ್ತು, ಕಣ್ಣುತುಂಬಿಕೊಂಡಿತು. ಆದರೂ ತುಂಡುಭೂಮಿಯನ್ನೂ ಬಿಡದೆ ಅಳೆದೆ ಅಳೆದ..
:-ಪ್ರಶಾಂತ್ ದಿಡುಪೆ
ಫೋಟೊ ಕೃಪೆ: ಅಂತರ್ಜಾಲ
ಕಥೆ ತುಂಬಾನೆ ಚೆನ್ನಾಗಿದೆ, ಕಥೆ ಇನ್ನೂ ಇದೆ ಇನ್ನೂ ಇದೆ ಅನ್ನಿಸುತ್ತಿರುವಾಗಲೇ ಕಥೆ ಮುಗಿದೆ ಹೊಯಿತು
ಪ್ರತ್ಯುತ್ತರಅಳಿಸಿnimma prathikrige dhanyavada
ಅಳಿಸಿTumba Chennagide Kathe Nandakke odisuva munde enu emba kutuhala moodisitu intaha Kathe kavanagalu heeegeye moodi barali
ಪ್ರತ್ಯುತ್ತರಅಳಿಸಿnimma prathikrige dhanyavada
ಅಳಿಸಿಬಹಳ ಚೆನ್ನಾಗಿದೆ, ಹೀಗೆ ಮುಂದುವರಿಯಲಿ ನಿಮ್ಮ ಪ್ರತಿಭೆ🙏
ಪ್ರತ್ಯುತ್ತರಅಳಿಸಿnimma prathikrige dhanyavada
ಅಳಿಸಿToutched.....thumbha chennagide..👌
ಪ್ರತ್ಯುತ್ತರಅಳಿಸಿnimma prathikrige dhanyavada
ಅಳಿಸಿ