ನಮಗಿಂಥ ಮಳೆ ಬೇಕಿತ್ತು



ನಿಂತ ನೀರಡಿ ಭೂಮಿ ಕೊಳೆತು ನಾರುತ್ತಿದೆ
ಬಾಚಿದ ಕ್ರಾಪಿನಡಿ ಮುದ್ದೆಮಿದುಳು ನಾರು ನಾರಾಗಿದೆ
ಮೂಲ ಮರೆತ ಕುರುಡು ಮಂಡೆಗಳು
ಮತಾಂಧ ಮೊರಿಯೊಳಗೆ ನುಗ್ಗಿ
ನಾರು, ಕೊಳೆಗಳಿಗೀಗ ಸುಗ್ಗಿ
ಸಿದ್ಧಾಂತದ ಗುಂಡುಕಲ್ಲಿಗೆ ರಕ್ತಾಭಿಷೇಕ ದೇಹಪ್ರಸಾದ

ಎಲ್ಲಾ ಮೆದ್ದು ಕೊಬ್ಬಿ ಕೆನೆಯುವ ಶರಧಿ
ಕಸ ಸುರಿದಿದ್ದು ನಮ್ಮ ಮನೆಯಂಗಳಕೆ
ಜುಬ್ಬಾ, ಪೈಜಾಮ, ಟೊಪ್ಪಿ ಎಲ್ಲ್ಲೂ ಕಲೆಯಿಲ್ಲ
ನಿತ್ಯ ಶುಭ್ರ ವಿನೂತನ
ಪತಾಕೆಯಲ್ಲಿ ಸುತ್ತಿಟ್ಟ ಎಳ್ಳು ಜೀರಿಗೆ
ಜನನ ಮರಣಗಳ ಲೆಕ್ಕ ಬರೆಯುತ್ತಿದೆ
ಇದಲ್ಲವೇ?
ಮಾಯಲಾರದ ಗಾಯ ವಾಸಿಯಾಗದ ಹುಣ್ಣು

ನನ್ನೂರು ಕಾಯುತ್ತಿತ್ತು
ಭೂಮಿ ನೆಲ ಉತ್ತು ವರುಣ ನೀರು ಹನಿಸಿದರೆ
ತುಳಿದ ಪಾದದಡಿಯಿಂದ ಅಡಿಮೇಲಾದ ಮಣ್ಣಿಂದ
ಪ್ರೀತಿಗರಿಕೆ ಚಿಗುರೊಡೆಯಲು
ಸಾಮರಸ್ಯ ನಂದನದಲ್ಲಿ ಹೂ ಅರಳಲು

ಹೌದು
ನಮಗಿಂಥ ಮಳೆಬೇಕಿತ್ತು
ಹನುಮನ ಗುಡಿಯ ಕೆಸರ
ಖಾದ್ರಿ ಹುಸೇನರ ಕೈ ತೊಳೆಯುತ್ತಿತ್ತು
ಮಸೀದಿಯಲ್ಲಿ ತುಂಬಿದ ಕೊಳೆನೀರ
ರಾಮ, ಕೇಶವರ ಕೈ ಹೊರಚೆಲ್ಲುತ್ತಿತ್ತು
ಕೊಚ್ಚೆ ಕೊಳೆ ತೊಳೆಯುವ
ಸ್ವಚ್ಛಮಳೆಯೊಂದು ಬೇಕಿತ್ತು

                                                   :- ಪ್ರಶಾಂತ್ ದಿಡುಪೆ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಹುಮುಖಿ ಪ್ರತಿಭೆ ಕೆ.ಪಿ ತೇಜಸ್ವಿಯವರ ಬದುಕು ಬರಹ

ಕರಾವಳಿ ಬದುಕಿನ ಹಿನ್ನೆಲೆಯಲ್ಲಿ ‘ಗಾಂಧಿ ಬಂದ’ ಕಾದಂಬರಿಯ ಮಹತ್ವ

ಸಮತೆಯ ಕಟ್ಟು